ಕೆರೂರ: ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಬೇಕಾದರೆ ಸ್ವಚ್ಛತೆಯೇ ಮುಖ್ಯ ಕಾರಣ ಎಂದು ಬಲವಾಗಿ ನಂಬಿರುವ ಕೆರೂರ ಪಪಂ ಮುಖ್ಯಾಧಿಕಾರಿ ಜಗದೀಶ ನಾಯ್ಕರ ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಕನಸಿಗೆ ಇಂಬು ಕೊಡುತ್ತಿದ್ದಾರೆ. ಪೌರಕಾರ್ಮಿಕರ ಜತೆ ಸೇರಿ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಪಪಂ ಕಾರ್ಯಾಲಯಕ್ಕೆ ಆಗಮಿಸಿ ಪೌರ ಕಾರ್ಮಿಕರನ್ನೆಲ್ಲ ಸೇರಿಸಿ ಸ್ವತಃ ತಾವೇ ಮುಂದಾಳತ್ವ ವಹಿಸಿ ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗುತ್ತಾರೆ. ಪೌರ ಕಾರ್ಮಿಕರನ್ನು ಕರೆದುಕೊಂಡು ಪಟ್ಟಣದ ರಸ್ತೆ, ಬಯಲು, ಗಟಾರ ಸೇರಿದಂತೆ ವಿವಿಧೆಡೆ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಮುಖ್ಯಾಧಿಕಾರಿ ತಮ್ಮ ಕಾರ್ಯವೈಖರಿಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬೇಸಿಗೆಯ ಬಿಸಿಲಿನ ಪ್ರತಾಪಕ್ಕೆ ನೀರಿನ ಮೂಲಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಂಡ ಪಟ್ಟಣದ 110 ಎಕರೆ ವಿಸ್ತೀರ್ಣದ ಕೆರೆಯ ನೀರಿನ ಆಳ ಕಡಿಮೆಯಾಗುತ್ತಿದೆ. ನೀರಿನ ಕೊರತೆಯಾಗಬಾರದೆಂದು ಪಟ್ಟಣದಲ್ಲಿಯ ಬಾವಿಗಳನ್ನು ಸ್ವಚ್ಛಗೊಳಿಸಿ ನೀರನ್ನು ತಿಳಿಯಾಗಿಸಿ ನಾಗರಿಕರು ಬಳಕೆ ಮಾಡುವಂತೆ ಮಾಡಿದ್ದಾರೆ.
ನೀರನ್ನು ಮಿತವಾಗಿ ಬಳಕೆ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದ್ದು, ಅವು ಸಮರ್ಪಕವಾಗಿ ಬಳಕೆಯಾಗುವಂತೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಸ್ಯಾನಿಟರಿ ಇನ್ಸ್‌ಪೆಕ್ಟರ್ ನವೀನ ಮಹಾರಾಜನವರ, ಬಿ.ಸಿ.ಕಟ್ಟಿಮನಿ ಹಾಗೂ ಪೌರಕಾರ್ಮಿಕರು ಸಾಥ್ ನೀಡಿದ್ದಾರೆ.
ನಾಗರಿಕರ ಅನುಕೂಲಕ್ಕೆ ಆದ್ಯತೆ ಈ ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹಾಗೂ ನೀರಿನ ಕೊರತೆ ಆಗುವುದು ಸಹಜ. ನಾಗರಿಕರಿಗೆ ಯಾವ ತೊಂದರೆಯೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಪಟ್ಟಣ ಪಂಚಾಯಿತಿಯದ್ದು. ನಾನು ಚುನಾವಣೆ ನಿಮಿತ್ತ ವರ್ಗಾವಣೆಗೊಂಡು ಬಂದವನು. ನನ್ನ ಅವಧಿ ಮೂರು ತಿಂಗಳಾಗಬಹುದು, ನಾನಿರುವಷ್ಟು ದಿನ ಪ್ರಾಮಾಣಿಕವಾಗಿ ಪಟ್ಟಣದ ಸೇವೆ ಮಾಡುವುದು ನನ್ನ ಜವಾಬ್ದಾರಿ ಎಂದು ಪಪಂ ಮುಖ್ಯಾಧಿಕಾರಿ ಜಗದೀಶ ನಾಯಕ ತಿಳಿಸಿದ್ದಾರೆ.