ದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಸೋಮವಾರ ಕರೆ ನೀಡಿದ್ದ ಕೆರೂರ ಚಲೋ ಯಶಸ್ವಿ 
ಜಿಲ್ಲೆ

ಕೆರೂರ ಚಲೋ ಯಶಸ್ವಿ, ಸೌಹಾರ್ದತೆ ನಡಿಗೆಗೆ ಬ್ರೇಕ್ !

ಬಾಗಲಕೋಟೆ: ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಸೋಮವಾರ ಕರೆ ನೀಡಿದ್ದ ಕೆರೂರ ಚಲೋ ಯಶಸ್ವಿಯಾಗಿದೆ. ಮತ್ತೊಂದೆಡೆ ಕೆರೂರ ಚಲೋಗೆ ವಿರುದ್ಧವಾಗಿ ಭಾರತೀಯ ಶರಣ ಸೇನಾ ಕಾರ್ಯಕಾರ್ತರು ಹಮ್ಮಿಕೊಂಡಿದ್ದ ಸೌಹಾರ್ದತೆ ನಡಿಗೆ ಕೆರೂರ ಕಡೆಗೆ ಪಾದಯಾತ್ರೆಗೆ ಬ್ರೇಕ್ ಬಿದ್ದಿತು.
ಇತ್ತೀಚಿಗೆ ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಹಾಗೂ ನಂತರದಲ್ಲಿ ಪೊಲೀಸರು ಬಂಧಿಸಿದ್ದ ಹಿಂದೂ ಕಾರ್ಯಕರ್ತರ ಮೇಲೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಹಿಂಜಾವೇ ಕರೆ ಮೇರೆಗೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಕೆರೂರ ಪಟ್ಟಣಕ್ಕೆ ಆಗಮಿಸಿದ್ದರು.
ಪಟ್ಟಣದ ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತರಕಾರಿ ಮಾರುಕಟ್ಟೆಯ ವರೆಗೂ ನಡೆಯಿತು. ಮಾರ್ಗದುದ್ದಕ್ಕೂ ಬಾದಾಮಿ ಸಿಪಿಐ ಕರೆಪ್ಪ ಬನ್ನೆ ಹಾಗೂ ಡಿಎಸ್ಪಿ ಪ್ರಶಾಂತ ಅವರ ವಿರುದ್ದ ಘೋಷಣೆ ಕೇಳಿ ಬಂದವು. ಕೆಲ ಕಾರ್ಯಕರ್ತರು ಸಿಪಿಐ ವಿರುದ್ದ ಅಶ್ಲೀಲವಾಗಿಯೇ ಘೋಷಣೆ ಹಾಕುತ್ತಿದ್ದರು. ಇನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ತರಕಾರಿ ಮಾರುಕಟ್ಟೆಯಲ್ಲಿ ಬಹಿರಂಗ ಸಭೆ ನಡೆಯಿತು.
ಸಭೆಯಲ್ಲಿ ಮುಖ್ಯಭಾಷಣ ಮಾಡಿದ ಹಿಂಜಾವೇ ಮುಖಂಡ ಜಗದೀಶ ಕಾರಂತ, ಮಾತು, ಮಾತಿನಲ್ಲಿ ಡಿಎಸ್ಪಿ ಪ್ರಶಾಂತ ಮುನವಳ್ಳಿ ವಿರುದ್ಧವೇ ಕೆಂಡಕಾರಿದರು. ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ, ಬಾದಾಮಿ ಶಾಸಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಡಿವೈಎಸ್ಪಿ ಪ್ರಶಾಂತ ಹಾಗೂ ಸಿಪಿಐ ಕರೆಪ್ಪ ಬನ್ನಿ ಅವರನ್ನು ಸೇವೆಯಿಂದ ಅಮಾನತು ಮಾಡಿದರೆ ಆಗಲ್ಲ. ಸೇವೆಯಿಂದ ವಜಾ ಮಾಡಬೇಕು. ಅಲ್ಲಿವರೆಗೂ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೇಳಿಕೇಳಿ ಇವರೆಲ್ಲ ಜನತಾ ಪರಿಹಾರದವರು :
ಕೆರೂರ ಪಟ್ಟಣದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದರೂ ಸರ್ಕಾರ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಸಿಎಂಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ಹರಿಹಾಯ್ದು ಜಗದೀಶ ಕಾರಂತ, ಸಿಎಂ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಅಂಡರ್ ಸ್ಟ್ರ್ಯಾಂಡಿಂಗ್ ಇದೆ ಎಂದು ನೇರವಾಗಿ ದೂರಿದರು.
ವೇದಿಕೆಯಲ್ಲಿ ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಹಿಂಜಾವೇ ಜಿಲ್ಲಾಧ್ಯಕ್ಷ ರಾಜು ಮುತ್ತಿಗಿ, ಅಯ್ಯನಗೌಡ ಹೆರೂರ, ಸಿ.ಕೆ.ಕಾಮಗೊಂಡ, ಕಾಂತೇಶ ವಿಜಯಪುರ ಇದ್ದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ಕಿರಣ ಪವಾಡಶೆಟ್ಟರ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ಶ್ರೀಕಾಂತ ಕುಲಕರ್ಣಿ, ನಾರಾಯಣಸಾ ಭಾಂಡಗೆ, ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಸೇರಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು :
ಇನ್ನು ಕೆರೂರ ಚಲೋಗೆ ವಿರುದ್ದವಾಗಿ ಭಾರತೀಯ ಶರಣ ಸೇನಾ ವತಿಯಿಂದ ಕುಳಗೇರಿ ಕ್ರಾಸ್ ನಿಂದ ಕೆರೂರ ಪಟ್ಟಣದ ಅಂಬೇಡ್ಕರ್ ಸರ್ಕಲ್ ವರೆಗೂ ಸೌಹಾರ್ದತಾ ನಡಿಗೆ ಕೆರೂರ ಕಡೆಗೆ ಪಾದಯಾತ್ರೆಯನ್ನು ಮುಖಂಡ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು. ಆದರೆ, ಪೊಲೀಸರು ಪರವಾನಿಗೆ ನೀಡರಲಿಲ್ಲ. ಅದಾಗ್ಯೂ ಅವರು ಪಾದಯಾತ್ರೆಗೆ ಮುಂದಾಗಿದ್ದರು. ಹೀಗಾಗಿ ನಡಿಗೆಗೆ ಮುಂದಾಗುತ್ತಿದ್ದಂತೆ ಕುಳಗೇರಿ ಕ್ರಾಸ್ ನಲ್ಲಿ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಕೆರೂರ ಪಟ್ಟಣದಲ್ಲಿ ಭಾರಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.