ಮದ್ದೂರು: ಮದ್ದೂರಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಬಹು ದಿನದ ಕನಸಾಗಿದ್ದ ಕೆಮ್ಮಣ್ಣು ನಾಲೆಯ ಆಧುನಿಕರಣ 4 ತಿಂಗಳಲ್ಲಿ ಮುಗಿದು ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಮ್ಮಣ್ಣು ನಾಲೆ ಆಧುನಿಕರಣ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಮಂಗಳವಾರ ಪರಿಶೀಲನೆ ನಡೆಸಿ ಮಾತನಾಡಿದರು. ಕೆಮ್ಮಣ್ಣು ನಾಲೆ ಆಧುನಿಕರಣದ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ರೈತರಿಗೆ ಸಮಸ್ಯೆ ಆಗದಂತೆ, ಸಣ್ಣ ಪುಟ್ಟ ಬದಲಾವಣೆ ಅವಶ್ಯಕತೆ ಇದ್ದರೆ ಹಾಗೂ ಹೆಚ್ಚುವರಿ ಕಾಮಗಾರಿ ಅವಶ್ಯಕತೆ ಇದ್ದರೆ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರ ರಘುರಾಮನ್ ಅವರು ನನ್ನ ಜತೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಏನಾದರು ಬದಲಾವಣೆ ಮಾಡಬೇಕಾಗಿದ್ದಲ್ಲಿ ಅಥವಾ ಹೆಚ್ಚಿನ ಅನುದಾನ ಬೇಕಾದರೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕವರ್ ಡಕ್ ಮಾಡುವ ಸ್ಥಳದಲ್ಲಿ ಎತ್ತರ ಮಾಡುವಂತೆ ತಿಳಿಸಿದ್ದೇನೆ. ಇದರಿಂದ ಸ್ವಚ್ಛತೆ ಮಾಡಲು ಅನುಕೂಲವಾಗುತ್ತದೆ ಎಂದ ಅವರು, ಕೆಮ್ಮಣ್ಣು ನಾಲೆ ಕಾಮಗಾರಿ ನಡೆಯುತ್ತಿರುವುದರಿಂದ ರೈತರಿಗೆ ಒಂದು ಬೆಳೆಗೆ ಮಾತ್ರ ನೀರಿಗೆ ಸಮಸ್ಯೆಯಾಗುತ್ತದೆ ಮುಂದಿನ 60 ವರ್ಷ ರೈತರು ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ನಾನು ಶಾಸಕನಾದ 2 ವರ್ಷದಲ್ಲಿ ರಾಜ್ಯ ಸರ್ಕಾರ 1300 ಕೋಟಿ ರೂ.ಗೂ ಅಧಿಕ ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದೆ. ಮುಂದೆಯೂ ಹೆಚ್ಚಿನ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದರು.
ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರ ರಘುರಾಮನ್, ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು, ಸಹಾಯ ಅಭಿಯಂತರರಾದ ಚೇತನ್, ದೀಪಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಟಿಎಪಿಸಿಎಂಎಸ್ ಉಪಾಧ್ಯಕ್ಷ ಗೊರವನಹಳ್ಳಿ ರಾಘವ ಸೇರಿದಂತೆ ಇತರರು ಇದ್ದರು.