ಜಿಲ್ಲೆ

ಕೆಬ್ಬೇಹುಂಡಿ ಗ್ರಾಮದಲ್ಲಿ ಕಗ್ಗತ್ತಲು

 ತಿ.ನರಸೀಪುರ: ತಾಲೂಕಿನ ಎಂ.ಕೆಬ್ಬೇಹುಂಡಿ ಗ್ರಾಮದಲ್ಲಿ ಸತತ ಮೂರು ತಿಂಗಳಿನಿಂದಲೂ ಬೀದಿ ದೀಪಗಳು ಬೆಳಗದಿರುವುದರಿಂದ ಕಗ್ಗತ್ತಲ ಕಾರಣ ಮಹಿಳೆಯರು, ಮಕ್ಕಳು ರಾತ್ರಿ ಹೊತ್ತು ಸಂಚರಿಸಲು ಭಯಪಡುವಂತಾಗಿದೆ.

ಸೋಸಲೆ ಹೋಬಳಿಯ ಮುತ್ತಲವಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಇರುವ ಎಂ.ಕೆಬ್ಬೇಹುಂಡಿ ಗ್ರಾಮದಲ್ಲಿ ಹಲವು ತಿಂಗಳಿನಿಂದಲೂ ವಿದ್ಯುತ್ ಬೀದಿ ದೀಪಗಳು ಕೆಟ್ಟು ಹೋಗಿದ್ದರೂ ಸರಿಪಡಿಸದಿರುವುದು ಪಂಚಾಯಿತಿಯ ಸ್ಥಳೀಯ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿಯಾಗಿದೆ.

ಪಂಚಾಯಿತಿಯ ಕೇಂದ್ರ ಸ್ಥಾನವಾಗಿರುವ ಎಂ ಕೆಬ್ಬೆಹುಂಡಿ ಗ್ರಾಮದಲ್ಲಿ ಆರೇಳು ಬೀದಿಗಳಿದ್ದು, ಇನ್ನೂರಕ್ಕೂ ಹೆಚ್ಚು ವಿದ್ಯುತ್ ಬೀದಿ ದೀಪಗಳಿವೆ. ಅವುಗಳಲ್ಲಿ ಬೆರಳಣಿಕೆಯಷ್ಟು ಕಂಬಗಳಲ್ಲಿ ಉರಿದರೆ, ಇನ್ನುಳಿದ ಕಂಬಗಳಲ್ಲಿ ಬಲ್ಪ್‌ಗಳು ಇದ್ದರೂ ಯಾವೊಂದು ವಿದ್ಯುತ್ ದೀಪವನ್ನು ಬೆಳಕು ಬೀರುತ್ತಿಲ್ಲ. ಇನ್ನೂ ಹಲವೆಡೆ ವಿದ್ಯುತ್ ಕಂಬಗಳಿಗೆ ದೀಪಗಳನ್ನೇ ಅಳವಡಿಸಿಲ್ಲ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕೇಳಿಯೂ ಕೇಳಿದವರಂತೆ ಸುಮ್ಮನಿದ್ದು ಬಿಟ್ಟಿದ್ದಾರೆ. ಸ್ಥಳೀಯ ಪಂಚಾಯಿತಿ ಸದಸ್ಯರನ್ನು ಪ್ರಶ್ನಿಸಿದರೆ ಅವರು ಪಿಡಿಒ ಅವರತ್ತ ಬೊಟ್ಟು ಮಾಡಿ ತೋರುತ್ತಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ರಾಮಸ್ವಾಮಿ ನಾಲೆಯ ದಡದಲ್ಲಿ ಸುತ್ತಲೂ ನೀರಾವರಿ ಕೃಷಿ ಜಮೀನಿನ ಮಧ್ಯೆ ಇರುವ ಎಂ. ಕೆಬ್ಬೆಹುಂಡಿ ಗ್ರಾಮದಲ್ಲಿ ರಾತ್ರಿಯ ವೇಳೆ ಇದುವರೆಗೂ ನಾಲ್ಕೈದು ಮಂಡಲದ ಹಾವುಗಳು ಬಲಿಯಾಗಿವೆ. ಖಾರಿಫ್ ಫಸಲಿನ ಭತ್ತದ ಬೆಳೆ ಕಟಾವು ಮುಗಿದಿರುವುದರಿಂದ ಜಮೀನುಗಳಲ್ಲಿ ವಾಸ್ತವ್ಯವಿದ್ದ ಮಂಡಲದ ಹಾವುಗಳು ರಾತ್ರಿಯಾಗುತ್ತಿದ್ದಂತೆ ಊರಿನೊಳಗೆ ಬರಲಾರಂಭಿಸಿವೆ. ಬೀದಿ ದೀಪಗಳು ಇಲ್ಲದೆ ಕತ್ತಲಿನಲ್ಲಿ ಓಡಾಡುವ ಗ್ರಾಮಸ್ಥರು ಹರಿದು ಬರುವ ಹಾವುಗಳನ್ನು ತುಳಿದು ಕಚ್ಚಿಸಿಕೊಳ್ಳುವ ಅಪಾಯವಿದೆ.

ಮೂರು ತಿಂಗಳಿನಿಂದಲೂ ಎಂ.ಕೆಬ್ಬೆಹುಂಡಿ ಗ್ರಾಮದಲ್ಲಿ ವಿದ್ಯುತ್ ಬೀದಿ ದೀಪಗಳು ಬೆಳಗದ ಸಮಸ್ಯೆ ಗಂಭೀರದ ಸ್ವರೂಪವಾಗಿದ್ದರೂ ಪರಿಹರಿಸುವ ಕಾಳಜಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಲ್ಲವಾಗಿದೆ. ಕೆಲವು ದಿನಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಬದಲಾಯಿಸಿದ್ದು, ಹಿಂದಿನ ಅಧಿಕಾರಿ ಈಗಿನ ಅಧಿಕಾರಿಗೆ ಆಡಳಿತದ ಚಾರ್ಜ್ ನೀಡದ್ದರಿಂದ ಸಮಸ್ಯೆಯನ್ನು ಬಗೆಹರಿಸುವವರೇ ಇಲ್ಲದಂತಾಗಿದೆ. ಇನ್ನಾದರೂ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳು ಬೀದಿ ದೀಪಗಳ ಬವಣೆಯನ್ನು ಸರಿಪಡಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಎಂ.ಕೆಬ್ಬೇಹುಂಡಿ ಗ್ರಾಮದಲ್ಲಿ ಮೂರು ತಿಂಗಳಿನಿಂದಲೂ ವಿದ್ಯುತ್ ಬೀದಿ ದೀಪಗಳು ಬೆಳಕು ಬೀರುತ್ತಿಲ್ಲದಿರುವ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದಸ್ಯರನ್ನು ಕೇಳಿದರೆ ಪಿಡಿಒ ಕೇಳಿ ಎನ್ನುತ್ತಾರೆ. ಕತ್ತಲಿನಲ್ಲಿ ಓಡಾಡುವ ಗ್ರಾಮಸ್ಥರನ್ನು ಹಾವುಗಳು ಕಚ್ಚುವ ಮೊದಲು ವಿದ್ಯುತ್ ದೀಪಗಳ ಅಳವಡಿಕೆಗೆ ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕು. ಎಸ್.ಸಿದ್ದರಾಜು, ಗ್ರಾಮದ ನಿವಾಸಿ

ವಿದ್ಯುತ್ ಬೀದಿ ದೀಪಗಳ ಖರೀದಿಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ವಿಳಂಬವಾಯಿತು. ಎಂ.ಕೆಬ್ಬೇಹುಂಡಿ ಗ್ರಾಮಕ್ಕೆ ಅಗತ್ಯವಿರುವ ಬೀದಿ ದೀಪಗಳನ್ನು ಈಗಾಗಲೇ ಖರೀದಿಸಿದ್ದು, ಒಂದೆರಡು ದಿನದಲ್ಲಿ ಅಳವಡಿಸಿ ಸಮಸ್ಯೆಯನ್ನು ಸರಿಪಡಿಸುತ್ತೇವೆ. ನಾಗಮಣಿ ಕೃಷ್ಣ, ಅಧ್ಯಕ್ಷೆ, ಮುತ್ತಲವಾಡಿ ಗ್ರಾಮ ಪಂಚಾಯಿತಿ