ಜಿಲ್ಲೆ

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮನೆಗೆ ಮುತ್ತಿಗೆ ಹಾಕಲು ಯತ್ನ

ಮೈಸೂರು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾದ ಅಂದಾಜು 25 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಬಿಜೆಪಿ ಮತ್ತು ಪಕ್ಷದ ನಾಯಕರ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಕಾಶವಾಣಿ ವೃತ್ತದ ಬಳಿ ಇರುವ ಲಕ್ಷ್ಮಣ್ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಆಗ ತಡೆಯಲು ಮುಂದಾದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ವಿವಿ ಪುರಂ ಠಾಣೆಯ ಪೊಲೀಸರು 25ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು. ವಾಹನದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನಕ್ಕೆ ಕರೆದೊಯ್ದರು. ಹೆಸರು ಮತ್ತು ವಿಳಾಸ ಸೇರಿದಂತೆ ಇನ್ನಿತರ ಮಾಹಿತಿ ಪಡೆದುಕೊಂಡು ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಿದರು.

ಪಾಲಿಕೆ ಸದಸ್ಯ ರವೀಂದ್ರ, ಬಿಜೆಪಿ ಮುಖಂಡರಾದ ಕಾರ್ತಿಕ್ ಕುಮಾರ್, ಕಿರಣ್‌ಗೌಡ, ಸುಜಿತ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.