ಎನ್.ಆರ್.ಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ಶಾಲಾ ವಿಭಾಗದಲ್ಲಿ 350ಕ್ಕೂ ಹೆಚ್ಚು ಮಕ್ಕಳು ಇರುವುದರಿಂದ ಬಿಸಿಯೂಟ ಮಾಡಲು ವಿಸ್ತಾರ ಊಟದ ಸಭಾಂಗಣ ಅಗತ್ಯವಿದೆ ಎಂದು ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ತಿಳಿಸಿದರು.
ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇರುವುದರಿಂದ ಶಿಕ್ಷಕರ ಕೊರತೆಯೂ ಇದೆ. 19 ಶಿಕ್ಷಕರು ಇರಬೇಕಾಗಿತ್ತು. 13 ಶಿಕ್ಷಕರು ಮಾತ್ರ ಇದ್ದಾರೆ. ಕಾಯಂ ಮುಖ್ಯಶಿಕ್ಷಕರು ಬೇಕಾಗಿದ್ದಾರೆ. ಶಾಲೆಗೆ ಅನುದಾನದ ಕೊರತೆ ಇದೆ ಎಂದರು.
ಸಾಮಾಜಿಕ ಪರಿಶೋಧನೆ ಕಾರ್ಯಕ್ರಮದ ತಾಲೂಕು ವ್ಯವಸ್ಥಾಪಕಿ ರಶ್ಮಿತಾ ಮಾಹಿತಿ ನೀಡಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಪಾಲಕರಿಗೆ, ಮಕ್ಕಳಿಗೆ ಒಟ್ಟು 134 ಪ್ರಶ್ನೆಗಳಿವೆ. ಯಾವುದೇ ಸಮಸ್ಯೆ ಇದ್ದರೆ ಹೇಳಬಹುದು ಎಂದರು.
ಮುಂದಿನ 5 ವರ್ಷಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಸಮಗ್ರ ಶಿಕ್ಷಣ ನೀಡಲು ಕೇಂದ್ರದಿಂದ ಸಾಕಷ್ಟು ಅನುದಾನ ಬರಲಿದೆ. ಸರ್ಕಾರ ಈಗ ನೀಡುತ್ತಿರುವ ಸೌಲಭ್ಯಗಳು ಸರಿಯಾಗಿ ತಲುಪುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಶಾಲೆಗಳ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸುತ್ತೇವೆ. ಮಕ್ಕಳಿಗೆ ಯಾವುದೇ ಕೊರತೆಯಾಗಬಾರದು ಎಂಬುದೇ ಸರ್ಕಾರದ ಉದ್ದೇಶ. ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಸದಸ್ಯರು, ಪಾಲಕರು ಹಾಗೂ ಶಿಕ್ಷಕರು ಅಭಿಪ್ರಾಯ ತಿಳಿಸಿ, ಮೊಟ್ಟೆ, ತರಕಾರಿ ಘಟಕಗಳಿಗೆ ಇನ್ನಷ್ಟು ಅನುದಾನ ಅಗತ್ಯವಾಗಿದೆ. ಮಕ್ಕಳಿಗೆ ನೀಡುತ್ತಿರುವ ಯೂನಿಫಾರ್ಮ್‌ಗಳಲ್ಲಿ ಅಳತೆ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಮಕ್ಕಳ ಅಳತೆ ತೆಗೆದುಕೊಂಡು ಮಕ್ಕಳಿಗೆ ಯೂನಿಫಾರ್ಮ್ ನೀಡಬೇಕು. 350 ಮಕ್ಕಳಿಗೆ ಈಗ ಇರುವ ಕೊಠಡಿಗಳು ಸಾಕಾಗುತ್ತಿಲ್ಲ. ಹೊಸ ಕೊಠಡಿಗಳ ಅಗತ್ಯವಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಗೃಹ ಇಲ್ಲ. ಹೊಸ ಶೌಚಗೃಹ ಅಗತ್ಯವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಬೇಕಾಗಿದೆ ಎಂದು ತಿಳಿಸಿದರು.
ಕ್ರೀಡಾ ಪರಿಕರಗಳು ಬೇಕಾಗಿದೆ. ಕ್ರೀಡೆಗಾಗಿ ಒಂದು ದಿನ ಮೀಸಲಿಡಬೇಕು. ಮಳೆಯಿಂದ ಕೆಲವು ಕೊಠಡಿಗಳು ಸೋರುತ್ತಿದ್ದು ದುರಸ್ತಿ ಮಾಡಿಸಿಕೊಡಬೇಕು ಎಂದು ಮಕ್ಕಳು ಮನವಿ ಮಾಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಪುರುಷೋತ್ತಮ್, ತಾಲೂಕು ಬಿಸಿಎಂ ಹಾಸ್ಟೆಲ್ ವಿಸ್ತರಣಾಧಿಕಾರಿ ಧರ್ಮರಾಜ್, ಎ.ಅಬೂಬೇಕರ್, ಸರಸ್ವತಿ, ಎಚ್.ಎನ್.ರವಿಶಂಕರ್, ಉದಯಗಿಲ್ಲಿ, ಮೇಘನಾ, ಶಕುಂತಳಾ, ದೇವೇಂದ್ರ, ಸಲೀಂ, ಮಹಮ್ಮದ್ ವಸೀಂ, ಗಂಗಮ್ಮ ಇದ್ದರು.