ಜಿಲ್ಲೆ

ಕೆನರಾ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಕೊಡುಗೆ

ಗೊರೂರು:ಗೊರೂರು ಪದವಿಪೂರ್ವ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾಗಿರುವಂತಹ ಸಿಇಟಿ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಪುಸ್ತಕಗಳನ್ನು ಬೆಂಗಳೂರಿನ ಮಾಧವ ಕುಟುಂಬದ ಕುಟುಂಬಸ್ಥರು ಹಾಗೂ ಓರ್ವ ವಿದ್ಯಾರ್ಥಿಗೆ ತಲಾ 6 ಪುಸ್ತಕಗಳಂತೆ 600 ನೋಟ್ ಪುಸ್ತಕಗಳನ್ನು ಕೆನರಾ ಬ್ಯಾಂಕ್, ಸಿಬಿಜೆಇಎಫ್ ತಂಡದ ವತಿಯಿಂದ ವಿತರಿಸಲಾಯಿತು.
ಕೆನರಾ ಬ್ಯಾಂಕ್ ಗೊರೂರು ಶಾಖೆಯ ವ್ಯವಸ್ಥಾಪಕ ಪಿ. ಅಕ್ಷಯ್ ಅವರು ಮಾತನಾಡಿ, ಕೆನರಾ ಬ್ಯಾಂಕ್ ಕೇವಲ ಆರ್ಥಿಕ ಭದ್ರತೆಗಳನ್ನು ಮಾತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇಮಾಭಿವೃದ್ಧಿ ಕಾರ್ಯಗಳತ್ತ ಸಹಕಾರ ನೀಡುತ್ತಾ ಬಂದಿದೆ. ಸದೃಢ ಸಮಾಜ ನಿರ್ಮಾಣ ಮಾಡಬಲ್ಲ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಯಾವುದೇ ರೀತಿಯ ತೊಡಕಾಗಬಾರದು ಎನ್ನುವ ನಿಟ್ಟಿನಲ್ಲಿ ಗೊರೂರು ಶಾಖೆ ಸದಾ ಉತ್ಸುಕವಾಗಿದ್ದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಶೋಭಾ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹೊಸದಾಗಿ ಆರಂಭಗೊಂಡ ವಿಜ್ಞಾನ ವಿಭಾಗದ ಪ್ರಯೋಗಾಲಯವನ್ನು ಸ್ಥಳೀಯ ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದ್ದಾರೆ. ಜಿಲ್ಲಾ ಉಪ ನಿರ್ದೇಶಕರು ವಿಜ್ಞಾನ ಪ್ರಯೋಗಾಲಯದ ಉಪನ್ಯಾಸಕರ ನಿಯೋಜನೆ ಹಾಗೂ ವಿಭಾಗಕ್ಕೆ ಬೇಕಾದಂತ ಅಗತ್ಯ ಮೂಲಭೂತ ಸಲಕರಣೆಗಳನ್ನು ಒದಗಿಸಿಕೊಟ್ಟು ಸಂಸ್ಥೆಗೆ ಸಹಕಾರ ನೀಡಿದ್ದಾರೆ. ನಮ್ಮ ಗೊರೂರು ಕೆನರಾ ಬ್ಯಾಂಕ್ ಪ್ರತಿ ಬಾರಿಯೂ ಸಂಸ್ಥೆಗೆ ಬೇಕಾದಂಥ ಸಹಕಾರಗಳನ್ನು ನೀಡುತ್ತಲೇ ಬರುತ್ತಿದೆ. ಬ್ಯಾಂಕ್ ಸಹಕಾರಕ್ಕೆ ಕಾಲೇಜಿನ ಪ್ರತಿಯೊಬ್ಬರೂ ಆಭಾರಿಯಾಗಿದ್ದೇವೆ. ಹಾಗೂ ಸ್ಥಳೀಯರ ಪೂರ್ಣಪ್ರಮಾಣದ ಸಹಕಾರದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಜಗದೀಶ್, ಗೋವಿಂದರಾಜ್ ಹಾಗೂ ಸಂಸ್ಥೆಯ ಎಲ್ಲ ಉಪನ್ಯಾಸಕರು ಹಾಜರಿದ್ದರು.