ಜಿಲ್ಲೆ

ಕೆಡಿಸಿಸಿ ಬ್ಯಾಂಕ್​ನಲ್ಲಿ ಪ್ರತ್ಯೇಕ ಕೌಂಟರ್ ತೆರೆಯಿರಿ

ಶಿರಸಿ: ಕೆಡಿಸಿಸಿ ಬ್ಯಾಂಕ್​ನಲ್ಲಿ ಸಹಕಾರಿ ಸಂಘಗಳ ತ್ವರಿತ ವ್ಯವಹಾರಕ್ಕೆ ಪ್ರತ್ಯೇಕ ಕೌಂಟರ್​ಗಳನ್ನು ತೆರೆಯಬೇಕೆಂಬ ಒತ್ತಾಯ ಕೆಡಿಸಿಸಿ ಬ್ಯಾಂಕ್​ನ 100ನೇ ವಾರ್ಷಿಕ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಯಡಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ಮಾತನಾಡಿ, ಬ್ಯಾಂಕ್​ನಲ್ಲಿ ವ್ಯವಹರಿಸಲು ಒಂದೇ ಕೌಂಟರ್ ಇರುವುದರಿಂದ ಸಕಾಲಕ್ಕೆ ಸೌಲಭ್ಯ ಪಡೆಯಲು ಸದಸ್ಯರಿಗೆ, ಸಹಕಾರಿ ಸಂಘಗಳಿಗೆ ಸಾಧ್ಯವಾಗುತ್ತಿಲ್ಲ. ಸಮಯವೂ ವ್ಯರ್ಥವಾಗುತ್ತದೆ. ಸಹಕಾರಿ ಸಂಘಗಳ ವ್ಯವಹಾರಕ್ಕೆ ಪ್ರತ್ಯೇಕ ಕೌಂಟರ್​ಗಳನ್ನು ಸ್ಥಾಪಿಸಬೇಕು. ಸಾಲ ಸೌಲಭ್ಯ ತ್ವರಿತವಾಗಿ ಸಿಗುವಂತೆ ಕ್ರಮ ವಹಿಸಬೇಕು ಎಂದರು.

ನಾಣಿಕಟ್ಟಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ. ಹೆಗಡೆ ಮಾತನಾಡಿ, ಪ್ರತಿವರ್ಷ ಜಿಲ್ಲೆಯ 11 ತಾಲೂಕುಗಳ ತಲಾ ಒಂದು ಸಂಘವನ್ನು ಬ್ಯಾಂಕ್​ನಿಂದ ದತ್ತು ಪಡೆದು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ರೈತರ ಆಧಾರ್ ಕಾರ್ಡ್ ನೋಂದಣಿಯಿರುವ ಖಾತೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಜಮಾ ಮಾಡಬೇಕು ಎಂದರು. ನರಸಿಂಹ ಭಟ್ಟ ಮಾತನಾಡಿ, ಹೈನೋದ್ಯಮದಡಿ ಕೊಟ್ಟಿಗೆ ನಿರ್ವಿುಸಲು 2 ಲಕ್ಷ ರೂ. ನೀಡಲಾಗುತ್ತಿದೆ. ತೋಟಕ್ಕೆ ಮಣ್ಣು ಬದು ನಿರ್ವಿುಸಲು 65 ಸಾವಿರ ರೂ. ನೀಡಲಾಗುತ್ತಿದೆ. ಇವೆರಡರ ಒಟ್ಟು ಮೊತ್ತವನ್ನು 10 ಲಕ್ಷ ರೂ. ಗೆ ಏರಿಸಬೇಕು ಎಂದರು.

ಸಹಕಾರಿ ಧುರೀಣ ಉಮೇಶ ಭಾಗವತ ಮಾತನಾಡಿ, ಫಸಲ್ ಬಿಮಾ ಯೋಜನೆಯಡಿ ಪ್ರೀಮಿಯಂ ಪಡೆಯುವ ಕಂಪನಿಗಳು ರೈತ ಸದಸ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಬ್ಯಾಂಕ್​ನಿಂದ ರೈತರಿಗೆ ಮಾಹಿತಿ ನೀಡಬೇಕು ಎಂದರು. ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಗೆ ಮಧ್ಯಮಾವಧಿ ಸಾಲ ಯೋಜನೆಯಡಿ ಸರ್ಕಾರ ಈವರೆಗೆ 698 ಕೋಟಿ ರೂ. ಬಡ್ಡಿ ಮನ್ನಾ ಮಾಡಿದೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ: ಸಭೆಯಲ್ಲಿ ಕೆಡಿಸಿಸಿ ಬ್ಯಾಂಕ್​ನಿಂದ ದಿ. ಜಿ.ಎಸ್. ಹೆಗಡೆ ಅಜ್ಜೀಬಳ ಸ್ಮರಣಾರ್ಥ ಜಿಲ್ಲೆಯ ಉತ್ತಮ ಸಹಕಾರಿಗೆ ನೀಡುವ ಅಜ್ಜಿಬಳ ಸಹಕಾರ ಪ್ರಶಸ್ತಿಯನ್ನು ಹೊನ್ನಾವರದ ರಾಘವ ವಿಷ್ಣು ಬಾಳೇರಿ ಹಾಗೂ ಉತ್ತಮ ಸಹಕಾರಿ ನೌಕರ ಪ್ರಶಸ್ತಿಯನ್ನು ಯಲ್ಲಾಪುರದ ಮಹಾಬಲೇಶ್ವರ ಸುಬ್ರಾಯ ಭಟ್ಟ ಅವರಿಗೆ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ನೀಡಿ ಗೌರವಿಸಿದರು.2019-20ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೀಡುವ ಸುಂದರ್ ರಾವ್ ಪಂಡಿತ ಪ್ರಶಸ್ತಿಯನ್ನು ಶಿರಸಿಯ ಟಿ.ಆರ್.ಸಿ. ಸೊಸೈಟಿಗೆ, ತಾಲೂಕು ಮಟ್ಟದ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು ಶಿರಸಿ ತಾಲೂಕಿನ ಮುಂಡಗನಮನೆ, ಸಿದ್ದಾಪುರದ ಹೆಗ್ಗರಣಿ ಸೊಸೈಟಿ, ಮುಂಡಗೋಡಿನ ಚವಡಳ್ಳಿ-ಮಳವಳ್ಳಿ ಸೇವಾ ಸಹಕಾರಿ ಸಂಘ, ಯಲ್ಲಾಪುರ ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘ, ಹಳಿಯಾಳದ ರೈತರ ಸೇವಾ ಸಹಕಾರಿ ಸಂಘ, ಜೊಯಿಡಾದ ಪ್ರಧಾನಿ ಕೃಷಿ ಸೇವಾ ಸಹಕಾರಿ ಸಂಘ, ಕಾರವಾರದ ಮಾಜಾಳಿ ಸೇವಾ ಸಹಕಾರಿ ಸಂಘ, ಅಂಕೋಲಾದ ಹೆಗ್ಗಾರ ವ್ಯವಸಾಯ ಸೇವಾ ಸಹಕಾರಿ ಸಂಘ, ಕುಮಟಾ ವಾಲಗಳ್ಳಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ, ಹೊನ್ನಾವರದ ಹಡಿನಬಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಭಟ್ಕಳದ ಮುರ್ಡೆಶ್ವರ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೀಡಿ ಗೌರವಿಸಲಾಯಿತು.