StartFragment
ಧಾರವಾಡ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯಾಗಬೇಕಿದ್ದ ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿಷಯವೇ ದೊಡ್ಡ ಚರ್ಚೆಯಾಯಿತು. ಒಂದು ಹಂತದಲ್ಲಿ ಅಧಿಕಾರಿಗಳ ಗೈರು ಹಾಜರಿ ವಿಷಯ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ತಮ್ಮ ಎಂದಿನ ಮೌನ ಮುರಿದು ಮುನಿಸಿನಿಂದ ಮಾತನಾಡುವಂತೆ ಮಾಡಿತು.
ನಿಗದಿಗಿಂತ ಒಂದೂವರೆ ತಾಸು ತಡವಾಗಿ ಆರಂಭಗೊಂಡ ಸಭೆಯ ಆರಂಭದಲ್ಲಿ ಉಪಕಾರ್ಯದರ್ಶಿ ಎಸ್.ಜಿ. ಕೊರವರ ಅವರು ಗೈರಾದ ಅಧಿಕಾರಿಗಳ ಪಟ್ಟಿ ಓದಲಾರಂಭಿಸಿದರು. ಇದಕ್ಕೆ ಕೋಪಗೊಂಡ ಅಧ್ಯಕ್ಷೆ ವಿಜಯಲಕ್ಷ್ಮೀ, ಪ್ರತಿ ಸಲ ಇದು ಪುನರಾವರ್ತನೆಯಾಗುತ್ತಿದೆ. ಗೈರಾಗುವ ಬಗ್ಗೆ ಮುಂಚಿತವಾಗಿ ನಮಗೇಕೆ ಹೇಳುವುದಿಲ್ಲ? ಅಧೀನ ಅಧಿಕಾರಿಗಳಂತೂ ಮಾಹಿತಿಯೇ ತರುವುದಿಲ್ಲ. ಕೇಳಿದಾಗ ಹೊರಗೆ ಹೋಗಿ ಫೋನ್ ಮಾಡಿ ಕೇಳಿಕೊಂಡು ಬಂದು ಹೇಳುವ ಸ್ಥಿತಿ ಇದೆ. ಕಳೆದ ನಾಲ್ಕು ಸಭೆಗಳಿಂದ ಇದು ನಡದೇ ಇದೆ. ಹೀಗಾದರೆ ನಾವೇನು ಅಭಿವೃದ್ಧಿ ಮಾಡುವುದು? ಎಂದು ಸಿಡಿಮಿಡಿಗೊಂಡರು.
ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಳೆದ ಸಭೆಗೆ ಗೈರಾದವರೆಷ್ಟು? ಏನು ಕ್ರಮ ಆಗಿದೆ? ಎಂದು ಪ್ರಶ್ನಿಸಿದರು. 7 ಅಧಿಕಾರಿಗಳು ಗೈರಾಗಿದ್ದರು. ಅವರಿಗೆ ವಿವರಣೆ ಕೇಳಿ ನೋಟೀಸ್ ನೀಡಲಾಗಿದೆ ಎಂದು ಉಪಕಾರ್ಯದರ್ಶಿ ಕೊರವರ ಉತ್ತರಿಸಿದರು.
ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಗೈರಾಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ನೇರ ಅಧಿಕಾರ ನಮಗಿಲ್ಲ. ಅದೆಲ್ಲವೂ ಸರ್ಕಾರದ ಮಟ್ಟದಲ್ಲಿರುತ್ತದೆ. ವರದಿ ಮಾತ್ರ ನಾವು ಸಲ್ಲಿಸಬಹುದು ಎಂದು ಸ್ಪಷ್ಟನೆ ನೀಡಿದರು.
ಪ್ರತಿಕ್ರಿಯಿಸಿದ ಅಧ್ಯಕ್ಷೆ, ‘ಫೆ. 20ರಂದು ವಿಶೇಷ ಸಾಮಾನ್ಯ ಸಭೆ ಕರೆಯಲಿದ್ದೇನೆ. ಕಡ್ಡಾಯವಾಗಿ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿರಬೇಕು. ಇಷ್ಟು ಹೇಳಿದ ಮೇಲೆಯೂ ಸುಧಾರಿಸಿಕೊಳ್ಳದಿದ್ದಲ್ಲಿ ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಎಚ್ಚರಿಸಿದರು.
ತನಿಖೆಗೆ ಸಮಿತಿ ರಚಿಸಿ:
ಮಲಪ್ರಭಾ ಬಲದಂಡೆ ಕಾಲುವೆಯ ಉಪಕಾಲುವೆ ಹಾಗೂ ಕಾಲುವೆಯ ರಸ್ತೆ ಕಾಮಗಾರಿ ಆಗಿದೆ. ಈ ಸಂಬಂಧ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಿದ್ದೇವೆ. ಆದರೆ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಮತ್ತು ಸಿಇಒ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಬೇಕು ಎಂದು ಉಪಾಧ್ಯಕ್ಷ ಕರಿಗಾರ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಸಿಇಒ, ಜಿಪಂ ಅಧಿಕಾರ ವ್ಯಾಪ್ತಿ ಮೀರಿ ಆ ರೀತಿ ತನಿಖೆ ಮಾಡುವುದಕ್ಕೆ ಬರುವುದಿಲ್ಲ. ಕಳಪೆ ಕಾಮಗಾರಿ ಆಗಿದೆ ಎಂದು ಸಭೆಯಲ್ಲಿ ನಿರ್ಣಯ ಮಂಡಿಸಬಹುದಷ್ಟೇ. ಉಳಿದಂತೆ ವೈಯಕ್ತಿಕವಾಗಿ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಡಿಎಚ್ಒ ಯಶವಂತ ಮದೀನಕರ್ ಮಾತನಾಡಿ, ಚೀನಾ ದೇಶದಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಇಬ್ಬರ ತಪಾಸಣೆ ನಡೆಸಲಾಗಿದ್ದು. ಕರೊನಾ ವೈರಸ್ ಇಲ್ಲ ಎಂಬುದು ಸಾಬೀತಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ನಲ್ಲಿ ಇದಕ್ಕಾಗಿ ಪ್ರತ್ಯೇಕ ಐದು ಬೆಡ್ಗಳ ವಾರ್ಡ್ ಮಾಡಿದ್ದೇವೆ ಎಂದರು.
ತಾಳ ಮೇಳವಿಲ್ಲ:
ಬೆಳೆ ದರ್ಶಕ ತಂತ್ರಾಂಶದ ಸರ್ವೆಯಲ್ಲಿ ನಮೂದಿಸಿರುವ ಬೆಳೆಗೂ ಮತ್ತು ಸದ್ಯ ಕುಂದಗೋಳ ತಾಲೂಕಿನ ಶೇಂಗಾ ಖರೀದಿ ಕೇಂದ್ರಕ್ಕೆ ಶೇಂಗಾ ಸಲ್ಲಿಸಲು ನೀಡುತ್ತಿರುವ ಸರ್ವೆ ನಂಬರ್ಗೂ ತಾಳ ಮೇಳವಿಲ್ಲ. ಇದರಿಂದ ಗೊಂದಲ ಉಂಟಾಗಿದೆ ಎಂಬ ಅಂಶ ಸಭೆಗೆ ಬಂತು. ಈ ಕುರಿತು ತಹಸೀಲ್ದಾರರು ತನಿಖೆ ನಡೆಸಿ ವರದಿ ನೀಡಿದ್ದು, ಶೀಘ್ರವೇ ಗೊಂದಲ ಬಗೆಹರಿಸಬೇಕು ಎಂದು ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳಿಗೆ ಸಿಇಒ ಸೂಚನೆ ನೀಡಿದರು.
ಕೃಷಿ ಹೊಂಡ ನಿರ್ವಿುಸಿಕೊಂಡ ಸಾಕಷ್ಟು ರೈತರಿಗೆ ಇನ್ನೂ ಬಾಕಿ ಹಣ ಬಂದಿಲ್ಲ. ಕೂಡಲೇ ಅನುದಾನ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಸೂಚಿಸಿದರು.
ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೆನ್ನಮ್ಮ ಶಿವನಗೌಡ್ರ, ಕಲ್ಲಪ್ಪ ಪುಡಕಲಕಟ್ಟಿ, ನಿಂಗಪ್ಪ ಘಾಟಿನ್, ಜಿ.ಪಂ ಯೋಜನಾ ನಿರ್ದೇಶಕ ದೀಪಕ್ ಮಡಿವಾಳರ ಇದ್ದರು.
ವಿಡಿಯೋ ಕಾನ್ಪರೆನ್ಸ್ಗಾಗಿ ಬೆಂಗಳೂರಿಗೆ
ಅಧಿಕಾರಿಗಳು ಕೇಂದ್ರ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲೆಂದೇ ಸರ್ಕಾರ ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರದ ಕಚೇರಿಗಳಿಂದ ವಿಡಿಯೋ ಕಾನ್ಪರೆನ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕರು ವಿಡಿಯೋ ಕಾನ್ಪರೆನ್ಸ್ಗಾಗಿಯೇ ಬೆಂಗಳೂರಿಗೆ ಹೋಗಿದ್ದಾರಂತೆ!
ಇಂತಹ ಒಂದು ಪ್ರಸಂಗ ಸಭೆಯಲ್ಲಿ ನಗೆಪಾಟಲಿಗೀಡಾಯಿತು. ಇಲಾಖೆಯ ಸಹಾಯಕ ನಿರ್ದೇಶಕರು ತಮ್ಮ ಅನುಪಸ್ಥಿತಿಯಲ್ಲಿ ಸಭೆಗೆ ಕಳುಹಿಸಿಕೊಟ್ಟಿದ್ದ ಅಧೀನ ಅಧಿಕಾರಿ, ತಮ್ಮ ಸಹಾಯಕ ನಿರ್ದೇಶಕರು ವಿಡಿಯೋ ಕಾನ್ಪರೆನ್ಸ್ಗಾಗಿ ಬೆಂಗಳೂರಿಗೆ ಹೋಗಿದ್ದಾಗಿ ಸಮಜಾಯಿಷಿ ನೀಡಿದರು. ‘ವಿಡಿಯೋ ಕಾನ್ಪರೆನ್ಸ್ಗೆ ಯಾಕೆ ಬೆಂಗಳೂರಿಗೆ ಹೋಗಬೇಕು? ಅದು ನಡೆಯೋದು ನಿಮ್ಮ ಕಚೇರಿಯಲ್ಲೆ ಅಲ್ವೆ?’ ಎಂದು ಸಿಇಒ ಪ್ರಶ್ನಿಸಿದರು.
ಇನ್ನು ಇದೇ ಅಧಿಕಾರಿಗೆ ಹತ್ತಿ ಖರೀದಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ, ಸರಿಯಾದ ಉತ್ತರ ಬರಲಿಲ್ಲ. ಆಗ ಪುನಃ ನಿಮ್ಮ ಮೇಲಿನ ಅಧಿಕಾರಿಗೆ ಕರೆ ಮಾಡಿ ಕೇಳಿ ಎಂದಾಗ, ಅವರು ಕೋರ್ಟ್ಗೆ ಹೋಗಿದ್ದಾಗಿ ಹೇಳಿದರು. ಇದರಿಂದ ಆಕ್ರೋಶಗೊಂಡ ಸಿಇಒ, ‘ಆಗ ಬೆಂಗಳೂರಿಗೆ ಹೋಗಿದ್ದಾರೆಂದು ಹೇಳಿದ್ರಿ. ಈಗ ಕೋರ್ಟ್ಗೆ ಅಂತಿರಲ್ಲ , ಏನಿದು? ಎಂದು ಗದರಿಸಿದರು. ಆಗ ತಡಬಡಾಯಿಸಿದ ಅಧಿಕಾರಿ, ‘ನಿನ್ನೆ ಬೆಂಗಳೂರಿಗೆ ಹೋಗಿದ್ದರು. ಇಂದು ಕೋರ್ಟ್ಗೆ ಹೋಗಿದ್ದಾರೆ’ ಎಂದು ತೇಪೆ ಹಚ್ಚಲು ಮುಂದಾದಾಗ, ‘ಯಾವ ಕೇಸ್? ವೈಯಕ್ತಿಕವೇ? ಇಲಾಖೆಯದ್ದೆ? ಇಲಾಖೆಯದ್ದಾಗಿದ್ದರೆ ಯಾವಾಗ ನಡೆದಿದ್ದು? ಏನಿದೆ ಸದ್ಯ ಕೇಸ್ನ ಪ್ರಗತಿ? ಎಂಬೆಲ್ಲ ಸಿಇಒ ಮರುಪ್ರಶ್ನಿಸಿದಾಗ ಅಧೀನ ಅಧಿಕಾರಿಯ ಬೆವರಿಳಿಯಿತು.
EndFragment