ಜಿಲ್ಲೆ

ಕೆಟ್ಟು ನಿಂತ ಬಸ್, ಪರದಾಡಿದ ಪ್ರಯಾಣಿಕರು

ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿಗೆ ಸೋಮವಾರ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಆಕ್ಸಲ್ ತುಂಡಾಗಿ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮಧ್ಯಾಹ್ನ 2.30ರ ವೇಳೆಯಲ್ಲಿ ಕೊಳ್ಳೇಗಾಲದಿಂದ ಪೊನ್ನಾಚಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ತಾಳುಬೆಟ್ಟ ಸಮೀಪದ 2ನೇ ತಿರುವಿನ ಅರಣ್ಯ ಪ್ರದೇಶದ ಮಾರ್ಗ ಮಧ್ಯೆ ಆಕ್ಸಲ್ ತುಂಡಾಗಿ ಕೆಟ್ಟು ನಿಂತಿತು. ಈ ವೇಳೆ ಆಗಮಿಸಿದ ಲಾರಿಯೊಂದರಲ್ಲಿ ಜನರು ಗ್ರಾಮಕ್ಕೆ ತೆರಳಿದರು. ಇದರಿಂದ ಗ್ರಾಮಸ್ಥರು ಅದರಲ್ಲೂ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಿದರು.

ಸುಸ್ಥಿತಿ ಬಸ್ ಬಿಡುವಂತೆ ಒತ್ತಾಯ: ಕಳೆದ ಮೂರು-ನಾಲ್ಕು ತಿಂಗಳಿನಿಂದ ಗ್ರಾಮಕ್ಕೆ ಸಂಚರಿಸುವ ಸುಸ್ಥಿತಿಯಲ್ಲಿರದ ಈ ಬಸ್ ಹಿಂದೆ ಬ್ರೇಕ್ ವಿಫಲವಾಗಿ ಅಪಘಾತವಾಗಿತ್ತು. ಜತೆಗೆ ಆಗಾಗ್ಗೆ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಮಾರ್ಗಕ್ಕೆ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಬಸ್ ತಡೆದು ಪ್ರತಿಭಟನೆಯನ್ನು ನಡೆಸಿದ್ದರು. ಶಾಸಕರು ಅಗತ್ಯ ಭರವಸೆಯನ್ನು ನೀಡಿದ್ದರು. ಆದರೆ ಸುಸ್ಥಿತಿಯಲ್ಲಿರದ ಬಸ್ ಅನ್ನು ಈ ಮಾರ್ಗದಲ್ಲಿ ಸಂಚರಿಸಲು ಬಿಡಲಾಗಿದೆ. ಇದರಿಂದ ಆಗ್ಗಾಗ್ಗೆ ಕೆಟ್ಟು ನಿಲ್ಲಲು ಕಾರಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಈ ಮಾರ್ಗಕ್ಕೆ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಸಾಮಾಜಿಕ ಹೋರಾಟಗಾರ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ.