ಜಿಲ್ಲೆ

ಕೆಟ್ಟ ಮೇಲೆ ಬುದ್ದಿ ಬಂತು ಅಂತ ಈಶ್ವರಪ್ಪ ತಿವಿದಿದ್ದು ಯಾರಿಗೆ?

reportermys

ಹಾಸನ: ಸಚಿವ ಸಂಪುಟಕ್ಕೆ ಯಾರನ್ನ ಸೇರಿಸಿಕೊಳ್ಳಬೇಕು, ಯಾರನ್ನ ಕೈ ಬಿಡಬೇಕು ಎಂಬುದರ ಕುರಿತು ಕೇಂದ್ರ ಹಾಗೂ ರಾಜ್ಯದ ನಾಯಕರು ತೀರ್ಮಾನಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಶುಕ್ರವಾರ ಸಂಜೆ ಹಾಸನಾಂಬೆ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ ಆಡಳಿತವನ್ನು ಜನ ಒಪ್ಪಿದ್ದಾರೆ. ಆದ್ದರಿಂದಲೇ ವಿಧಾನ ಪರಿಷತ್‌ನ 4 ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದರು.

ಆರ್.ಆರ್. ನಗರ ಹಾಗೂ ಶಿರಾ ಉಪಚುನಾವಣೆ ರಾಜ್ಯ ರಾಜಕಾರಣದ ದಿಕ್ಸೂಚಿ ಎನ್ನುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇನ್ನಾದರೂ ಆ ಭ್ರಮೆಯಿಂದ ಹೊರಬರಲಿ. ಚುನಾವಣಾ ಫಲಿತಾಂಶದಿಂದ ಕಂಗೆಟ್ಟಿರುವ ಇಬ್ಬರೂ ನಾಯಕರು ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ತಾವೇ ಮುಂದಿನ ಸಿಎಂ ಎಂದು ಹೇಳಿಸಿಕೊಂಡ ಮಹಾನುಭಾವರಿಗೆ ಕೆಟ್ಟ ಮೇಲೆ ಬುದ್ದಿ ಬಂದಂತಾಗಿದೆ ಎಂದರು.

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ನಾವು ಅನೇಕ ಸಂದರ್ಭದಲ್ಲಿ ಸೋತಿದ್ದೇವೆ. ಆಗ ಯಾರ ಮೇಲೂ ದ್ವೇಷ ಸಾಧಿಸಿಲ್ಲ. ಗೆದ್ದರೆ ಸೋನಿಯಾ ಗಾಂಧಿಗೆ ಕ್ರೆಡಿಟ್ ಸಲ್ಲಿಸುವುದು, ಸೋತರೆ ಕೆಳಮಟ್ಟದ ನಾಯಕರಿಂದ ರಾಜೀನಾಮೆ ಪಡೆಯುವುದು. ಇದು ಕಾಂಗ್ರೆಸ್‌ನಲ್ಲಿ ಬಹುವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿ ಎಂದರು.