ಜಿಲ್ಲೆ

ಕೆಜಿಎಫ್ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಕ್ರಮ

ಕೋಲಾರ: ಕೆಜಿಎಫ್ ತಾಲೂಕುಮಟ್ಟದ ಆಸ್ಪತ್ರೆ ವಿಭಾಗಮಟ್ಟದ ಆಸ್ಪತ್ರೆಯಾಗಿ ಮಾರ್ಪಟ್ಟಿದ್ದು, ಜಿಲ್ಲಾಮಟ್ಟದ ಶಸ್ತ್ರಚಿಕಿತ್ಸಕರ ಹುದ್ದೆ ಖಾಲಿ ಇದೆ. 150 ಬೆಡ್ ಆಸ್ಪತ್ರೆ, 100 ಬೆಡ್ ಅಪ್‌ಗ್ರೇಡೆಡ್ ತಾಯಿ-ಮಗುವಿನ ಆಸ್ಪತ್ರೆ, 30 ಬೆಡ್ ಸಾಂಕ್ರಾಮಿಕ ರೋಗದ ಆಸ್ಪತ್ರೆ ಇದೆ. ಶಾಸಕಿಯ ಕಾಳಜಿ ಅರ್ಥೈಸಿಕೊಂಡಿದ್ದು, ಅಸ್ಪತ್ರೆ ಮೇಲ್ದರ್ಜೆಗೇರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಗುರುವಾರ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದ ಕೆಜಿಎಫ್

ಶಾಸಕಿ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊರ ರೋಗಿಗಳ ಪ್ರಮಾಣ, ಅಗತ್ಯವಾದ ಸೌಲಭ್ಯಗಳು ಮತ್ತಿತರ ಅಂಶಗಳ ಕುರಿತು ಸರ್ವೇ ನಡೆಸಲು ಸೂಚಿಸಿದ್ದು, ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆ ತುಂಬುವ ಪ್ರಯತ್ನ ನಡೆದಿದ್ದು, ಇತರ ತಜ್ಞರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಕ್ರಮ ಕೈಗೊಂಡಿದ್ದೇವೆ, ಆರೋಗ್ಯ ಸಚಿವರಿಂದ ಶಾಸಕರಿಗೆ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.

ರೂಪಕಲಾ ಮಾತನಾಡಿ, ಕೆಜಿಎ್ ಆಸ್ಪತ್ರೆ ಮಾನ್ಯತೆ ಹೊಂದಿದ ಜಿಲ್ಲಾಸ್ಪತ್ರೆಯಾದರೂ ಸೂಕ್ತ ಆರೋಗ್ಯ ಸೌಲಭ್ಯ ಮತ್ತು ತಜ್ಞರ ಕೊರತೆಯಿಂದ ನರಳುತ್ತಿದೆ. ಕೆಜಿಎಫ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ಅನುದಾನ ನೀಡಿ, ತಾಯಂದಿರು ಮತ್ತು ಮಕ್ಕಳ ಜೀವ ರಕ್ಷಿಸಿ ಎಂದು ಆಗ್ರಹಿಸಿದರು.

ಬ್ರಿಟಿಷರ ಕಾಲದಲ್ಲಿ ಆರಂಭವಾದ ಆಸ್ಪತ್ರೆಯನ್ನು ಮೈಸೂರು ಮಹಾರಾಜರು ಉದ್ಘಾಟಿಸಿದ್ದರು. ಆದರೆ ಹೆಚ್ಚುತ್ತಿರುವ ಜನಸಂಖ್ಯೆ, ಆರೋಗ್ಯ ಸಮಸ್ಯೆಗಳಿಗೆ ತಕ್ಕಂತೆ ಸರ್ಕಾರ ಆಸ್ಪತ್ರೆಗೆ ಸೌಲಭ್ಯ ಒದಗಿಸಿಲ್ಲ ಎಂದರು.

ಕೆಜಿಎಫ್‌ನಲ್ಲಿ 30ಮಿ. ಟನ್‌ಗಳಷ್ಟು ಸನೈಡ್ ದಿಬ್ಬಗಳಿದ್ದು, ಧೂಳಿನಿಂದ ಹೆಚ್ಚಿನ ಕಾರ್ಮಿಕರಲ್ಲಿ ಶ್ವಾಸಕೋಶ ತೊಂದರೆ ಹೆಚ್ಚಾಗಿದೆ. ಐಸಿಯು ಸೌಲಭ್ಯಗಳಿಲ್ಲದೇ ಕಾರ್ಮಿಕರ ಬದುಕು ಅಂತಂತ್ರವಾಗಿದೆ. ಹೃದಯ ಸಂಬಂಧಿ ತೊಂದರೆ ಉಂಟಾದರೇ ಕೋಲಾರ ಇಲ್ಲವೇ ಬೆಂಗಳೂರಿಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ. ಕಾರ್ಮಿಕರ ಬದುಕಿನ ದೃಷ್ಟಿಯಿಂದ ತಾಲೂಕು ಆಸ್ಪತ್ರೆ ಎಂದು ನಿರ್ಧರಿಸದೆ ವಿಶೇಷವಾಗಿ ಪರಿಗಣಿಸಿ ಸೌಲಭ್ಯ ನೀಡಿ ಎಂದು ಮನವಿ ಮಾಡಿದರು.

ಒಂದು ದಿನಕ್ಕೆ ಕನಿಷ್ಠ 1 ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಬಂದರೆ, ನಗರದ 2.5 ಲಕ್ಷ ಹಾಗೂ ಗ್ರಾಮೀಣ ಭಾಗದ 1.20 ಲಕ್ಷ ಜನಸಂಖ್ಯೆಗೆ ಇದು ಒಂದೇ ಸರ್ಕಾರಿ ಆಸ್ಪತ್ರೆಯಾಗಿದೆ. ಈ ಹಿಂದೆ ಶಿವಾನಂದಪಾಟೀಲ್ ಅವರಿಗೆ ಮನವಿ ಮಾಡಿ 8 ಕೋಟಿ ರೂ. ಅನುದಾನ ಪಡೆದು ಅಭಿವೃದ್ದಿ ಪಡಿಸಿದ್ದರೂ ಸಹ ತಜ್ಞರ ಮತ್ತು ಸೂಕ್ತ ಸೌಲಭ್ಯಗಳ ಕೊರತೆ ಕಾಡುತ್ತಿದೆ ಎಂದರು.

ಮಕ್ಕಳು ಅನಾಥರಾಗೋದನ್ನು ತಪ್ಪಿಸಿ: ಆಸ್ಪತ್ರೆಯಲ್ಲಿ ಬೆಡ್‌ಗಳಿದ್ದರೂ ತಜ್ಞ ವೈದ್ಯರು, ಶುಶ್ರೂಷಕಿಯರಿಲ್ಲ. ಸೌಲಭ್ಯಗಳ ಕೊರತೆಯಿಂದ ಬಾಣಂತಿಯರ ಸಾವನ್ನು ಸಹಿಸಲು ಸಾಧ್ಯವಿಲ್ಲ. ತಾಯಿಯ ಮಹತ್ವ ಅರಿತು ಸುರಕ್ಷತೆಗೆ ಆದ್ಯತೆ ನೀಡಿ. ತಾಯಿ-ಮಕ್ಕಳ ಆಸ್ಪತ್ರೆ ಅಪ್‌ಗ್ರೇಡ್ ಮಾಡಿ ಎಂದು ಶಾಸಕಿ ರೂಪಕಲಾ  ಒತ್ತಾಯಿಸಿದರು