ಜಿಲ್ಲೆ

ಕೆಜಿಎಫ್‌ ಆಸ್ಪತ್ರೆಗೆ ಕ್ಯಾಥ್‌ಲ್ಯಾಬ್ ಮಂಜೂರು : ಸಚಿವ ಸುಧಾಕರ್ ಘೋಷಣೆ : ತುರ್ತು ಚಿಕಿತ್ಸಾ ಘಟಕ, ಒಳರೋಗಿಗಳ ವಿಭಾಗ ಉದ್ಘಾಟನೆ

ಕೆಜಿಎಫ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ತುರ್ತು ಚಿಕಿತ್ಸಾ ಘಟಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಶಾಸಕಿ ಎಂ.ರೂಪಕಲಾ ಜತೆಗಿದ್ದರು.

ಕೆಜಿಎಫ್‌: ಕೆಜಿಎಫ್‌ನ ಸೈನೈಡ್ ಗುಡ್ಡಗಳಿಂದ ಸಿಲಿಕೋಸಿಸ್ ಎಂಬ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವುದನ್ನು ತಪ್ಪಿಸಲು ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಕ್ಯಾಥ್‌ಲ್ಯಾಬ್ ಮಂಜೂರು ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಘೋಷಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ತುರ್ತು ಚಿಕಿತ್ಸಾ ಘಟಕ, ಒಳರೋಗಿಗಳ ವಿಭಾಗ, ಧೋಬಿಘಾಟ್ ಮತ್ತು ಅಡುಗೆ ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಗೆ ಅಗತ್ಯವಿರುವ ಸಿಟಿಸ್ಕ್ಯಾನ್ ಯಂತ್ರ ಸೇರಿದಂತೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ನೀಡಲಾಗುವುದು. ಜತೆಗೆ ಕೊರತೆಯಿರುವ ವೈದ್ಯರು, ದಾದಿಯರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.


ಕ್ಯಾಸಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ನೀಡಿದ ಕ್ಯಾಸಂಬಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಅಲ್ಲದೆ ಅಗತ್ಯವಿರುವ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಿ, ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಡಾ.ಕೆ.ಸುಧಾಕರ್ ಭರವಸೆ ನೀಡಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ: ಶಾಸಕಿ ರೂಪಕಲಾ ಶಶಿಧರ್ ಕೆಜಿಎಫ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ವೈದ್ಯಕೀಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಪಿಪಿಪಿ ಮಾದರಿಯಲ್ಲಿ ಕೋಲಾರ ಅಥವಾ ಕೆಜಿಎಫ್‌ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಘೋಷಿಸಲು ಕ್ರಮ ಕೈಗೊಳ್ಳುವುದಾಗಿ ಸುಧಾಕರ್ ತಿಳಿಸಿದರು.

ಗ್ರಾಮೀಣ ಜನರಿಗೆ ಆರೋಗ್ಯಸೇವೆ: ಗ್ರಾಮೀಣ ಭಾಗದ ಬಡವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇವೆ ಒದಗಿಸುತ್ತಿದ್ದು. ಅದೇ ರೀತಿಯಲ್ಲಿ ನಗರ ಪ್ರದೇಶದ ಬಡವರಿಗಾಗಿ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ. ಕಳೆದ ತಿಂಗಳು ಧಾರವಾಡದಲ್ಲಿ ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಏಕಕಾಲಕ್ಕೆ 448 ನಮ್ಮ ಕ್ಲಿನಿಕ್‌ಗಳನ್ನು ಉದ್ಘಾಟಿಸಿದ್ದು, ಇಲ್ಲಿ 12 ವಿಧವಾದ ಪರೀಕ್ಷೆಗಳನ್ನು ಉಚಿತವಾಗಿ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಕೆಜಿಎಫ್, ಮಾಲೂರು ಮತ್ತು ಮುಳಬಾಗಿಲುಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿದೆ ಎಂದು ಸುಧಾಕರ್ ಹೇಳಿದರು.

ಆರೋಗ್ಯ ಕ್ರಾಂತಿ: ನರೇಂದ್ರ ಮೋದಿ ಪ್ರಧಾನಿಯಾದ 8 ವರ್ಷಗಳಲ್ಲಿ ದೇಶಾದ್ಯಂತ 157 ವೈದ್ಯಕೀಯ ಕಾಲೇಜುಗಳು ಮತ್ತು 22 ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಅಲ್ಲದೇ ಪ್ರತಿ ವರ್ಷ 30 ಸಾವಿರ ವೈದ್ಯರು ಮತ್ತು ಎಂ.ಡಿ. ಪದವಿಗಳನ್ನು ಪೂರೈಸಿರುವ 24 ಸಾವಿರ ವೈದ್ಯರು ತೇರ್ಗಡೆಯಾಗುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರಕ್ಕೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಕೊತ್ತೂರೋ, ಚಿತ್ತೂರೋ ಯಾರೊ ಒಬ್ಬರು ನಿಲ್ಲಬೇಕಲ್ಲವೇ ಎಂದಷ್ಟೇ ಉತ್ತರಿಸಿದರು. ಅಲ್ಲದೇ ಬಂಗಾರಪೇಟೆ ಮತ್ತು ಕೆಜಿಎಫ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ, ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಯಾರೋ ಒಬ್ಬರನ್ನು ಘೋಷಿಸಲಾಗುವುದು ಎಂದು ಸುಧಾಕರ್ ಉತ್ತರಿಸಿದರು.

ಬಿಜಿಎಂಎಲ್ ಆಸ್ಪತ್ರೆ ಸರ್ಕಾರದ ವಶಕ್ಕೆ ಚರ್ಚೆ: ಕೋವಿಡ್ ಸಮಯದಲ್ಲಿ ಸಂಸದ ಎಸ್.ಮುನಿಸ್ವಾಮಿ ಮುತುವರ್ಜಿ ವಹಿಸಿ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿದ 800 ಹಾಸಿಗೆಗಳ ಬಿಜಿಎಂಎಲ್ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಕಾರ್ಯ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಕೆಜಿಎಫ್‌ನಲ್ಲಿ ಚಿನ್ನದ ಗಣಿ ಆರಂಭ: ಸಂಸದ ಮುನಿಸ್ವಾಮಿ ಮಾತನಾಡಿ, ಕೆಜಿಎಫ್‌ನಲ್ಲಿ ಇನ್ನೂ ಬೇಕಾದಷ್ಟು ಚಿನ್ನದ ನಿಕ್ಷೇಪವಿದ್ದು ಕಳೆದ ತಿಂಗಳು ಗಣಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರದೇಶದಲ್ಲಿ ಓಪನ್ ಕಾಸ್ಟ್ ಗಣಿಗಾರಿಕೆ ನಡೆಸಬಹುದೆಂದು ಅಧಿಕಾರಿಗಳು ಮತ್ತು ಕೆಲವು ಹಿರಿಯ ಕಾರ್ಮಿಕರು ವರದಿ ನೀಡಿದ್ದು, ಮುಂದಿನ ದಿನಗಳಲ್ಲಿ ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಆರೋಗ್ಯದ ವಿಚಾರದಲ್ಲಿ ರಾಜಕೀಯ ಸಲ್ಲ: ಶಾಸಕಿ ಎಂ.ರೂಪಕಲಾ ಮಾತನಾಡಿ, ಆರೋಗ್ಯದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಚುನಾವಣಾ ಸಮಯದಲ್ಲಿ ರಾಜಕಾರಣ ಮಾಡೋಣ. ಕೆಜಿಎಫ್‌ನಲ್ಲಿ ಗಣಿಗಾರಿಕೆಯಿಂದಾಗಿ ಜನರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಾಜಿ ಶಾಸಕ ಭಕ್ತವತ್ಸಲಂ ಅವರು ಉಸಿರಾಟ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೇ ಇದ್ದುದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದರು. ಇದರಿಂದಾಗಿ ಕೆಜಿಎಫ್‌ಗೆ ಸರ್ಕಾರಿ ಮೆಡಿಕಲ್ ಮಂಜೂರು ಮಾಡುವಂತೆ ಮನವಿ ಮಾಡಿದೆ ಎಂದರು.


ಬೇಡಿಕೆ ಘೋಷಿಸುವಂತೆ ಪಟ್ಟು: ಕೆಜಿಎಫ್ ಸುತ್ತಮುತ್ತ ಸಾವಿರಾರು ಎಕರೆ ಜಾಗ ಇರುವುದರಿಂದ ಇಲ್ಲಿ ಮೆಡಿಕಲ್ ಕಾಲೇಜು, ಮೆಡಿಕಲ್ ರೀಸರ್ಚ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನರ್ಸಿಂಗ್ ಕಾಲೇಜು ಮತ್ತು ಆಸ್ಪತ್ರೆಗೆ ಅಗತ್ಯವಿರುವ ಸಿಟಿಸ್ಕಾೃನ್, ಎಂಆರ್‌ಐ ಯಂತ್ರಗಳು, ಅಗತ್ಯವಿರುವ ವೈದ್ಯರು ಮತ್ತು ದಾದಿಯರು ಹಾಗೂ ಸಲಕರಣೆಗಳನ್ನು ಒದಗಿಸಿಕೊಡುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳನ್ನು ವೇದಿಕೆಯಲ್ಲಿ ಘೋಷಣೆ ಮಾಡುವಂತೆ ಶಾಸಕಿ ರೂಪಕಲಾ ಪಟ್ಟು ಹಿಡಿದರು.

ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಉಪಾಧ್ಯಕ್ಷೆ ದೇವಿ ಗಣೇಶ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಇಂದುಮತಿ, ಡಿಎಚ್‌ಒ ಡಾ.ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಧರಣಿದೇವಿ ಮೊದಲಾದವರು ಇದ್ದರು.