ಬೀದರ್: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅನುದಾನ ಬಳಕೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ ಆ ಅನುದಾನ ಎಲ್ಲಿಗೆ ಹೋಯಿತು? ಇಲ್ಲಿ ನೋಡಿದರೆ ಒಂದು ಕೆಲಸ ಆಗುತ್ತಿಲ್ಲ. ಅಭಿವೃದ್ಧಿಗೆ ಹಣ ಇಲ್ಲ ಎಂದು ಶಾಸಕರು ಆರೋಪಿಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಯಿಂದ ನಡೆಯುತ್ತಿರುವ ಕೆಲಸ ಹಾಗೂ ಖರ್ಚಾದ ಅನುದಾನ ಕುರಿತು ಶ್ವೇತಪತ್ರವನ್ನು ಸರ್ಕಾರ ಹೊರಡಿಸಿಲಿ ಎಂದರು.
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಇದರ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕು. ನಾನು ಸಹ ಚುನಾವಣೆಯಲ್ಲಿ ಸೋತಿರುವೆ. ಸೋತರೆ ಮನೆಯಲ್ಲಿ ಕುಳಿತುಕೊಳ್ಳಬಾರದು. ಜನರ ಜತೆ ಸದಾ ಇರುವ ದೃಢ ಸಂಕಲ್ಪ ಮಾಡಬೇಕು. ಮತದಾರರ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.
ಕಾAಗ್ರೆಸ್ ಸರ್ಕಾರ ಭಾಷಣವೇ ಬಂಡವಾಳ ಮಾಡಿಕೊಂಡಿದೆ. ಅಭಿವೃದ್ಧಿಗೆ ಅನುದಾನ ಇಲ್ಲ. ಈ ಸರ್ಕಾರ ದಿವಾಳಿಯಾಗಿದೆ.ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ. ಗ್ಯಾರಂಟಿ ಯೋಜನೆಗಾಗಿ ದಿವಾಳಿಯಾಗಿದೆ, ಎಷ್ಟು ಅನುದಾನ ತಗಲುತ್ತದೆ ಎನ್ನುವ ಆಲೋಚನೆಗಳು ನನಗೆ ಇರಲಿಲ್ಲ ಎಂದು ಹಿಮಾಚಲ, ತೆಲಂಗಾಣ ಸಿಎಂ ಹೇಳಿದ್ದಾರೆ. ೪.೫೦ ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಷ್ಟು ಅನುದಾನ ಇದ್ದರೆ ರಾಜ್ಯ ಸಮೃದ್ಧಿಯಾಗುತ್ತಿತ್ತು. ಇವರ ಅನುದಾನ ಭಾಷಣಕ್ಕೆ ಸೀಮಿತವಾಗಿವೆ. ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿತ ಮುಖ್ಯವಲ್ಲ ಎಂದು ದೂರಿದರು.
ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದೆ. ಪಕ್ಷದ ಕಾರ್ಯಕರ್ತರು ಚುನಾವಣೆ ಇದಾಗಿದೆ. ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪಂಚಾಯಿತಿಗಳಲ್ಲಿ ಅಧಿಕಾರಿ ನಡೆಸುವ ಪಣ ತೊಡುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಚಟವಟಿಕೆ ಆರಂಭಿಸಬೇಕು ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು ೪೧ ವಿಧಾನಸಭೆ ಕ್ಷೇತ್ರಗಳಿವೆ. ಬರುವ ಚುನಾವಣೆಯಲ್ಲಿ ಕನಿಷ್ಠ ಶೇ.೫೦ರಷ್ಟ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಕುಮಾರಸ್ವಾಮಿ ಅವರಿಗೆ ಐದು ವರ್ಷದ ಅವಧಿ ಸಿಕ್ಕಿಲ್ಲ. ಅವರ ಕಲ್ಪನೆಯಲ್ಲಿ ಸಾಕಷ್ಟು ಯೋಜನೆಗಳು ಇವೆ. ರೈತರ ಸಮಗ್ರ ಅಭಿವೃದ್ಧಿ ಜೆಡಿಎಸ್ ಧ್ಯೇಯವಾಗಿದೆ. ಪೂರ್ಣ ಬಹುಮತದೊಂದಿಗೆ ಒಮ್ಮೆ ಅಧಿಕಾರಕ್ಕೆ ಬಂದರೆ ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿ ಹೊಂದಲಿದೆ ಎಂದರು.
ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ಜೆಡಿಎಸ್ ಪಲ್ಷದ ಮುಳುಗುತ್ತಿದೆ, ಅಲ್ಲಿ ಯಾವ ಶಾಸಕರು ಉಳಿಯುದಿಲ್ಲ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು ಯಾವ ಕಾಂಗ್ರೆಸ್ ನಾಯಕರು ಏನು ಮಾಡಲು ಆಗುವುದಿಲ್ಲ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜನರೊಂದಿಗೆ ಇರಲಿದೆ. ರಾಜ್ಯದ ಜನರ ಆಶೀರ್ವಾದ ಕುಮಾರಸ್ವಾಮಿ ಮೇಲಿದೆ ಎಂದ ಅವರು, ಪೆನ್ನು, ಪೇಪರ್ ಹಿಡಿದುಕೊಂಡು ಡಿಸಿಎಂ ಅವರು ತಮ್ಮ ಚೌಕಟ್ಟಿನಲ್ಲಿ ಇರಲಿ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮಾಜಿ ಶಾಸಕರಾದ ಸುರೇಶ ಗೌಡ, ಮಲ್ಲಿಕಾರ್ಜುನ ಖೂಬಾ, ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿದರು. ಪ್ರಮುಖರಾದ ಉಮಾಕಾಂತ ನಾಗಮಾರಪಳ್ಳಿ, ಬಸವರಾಜ ಪಾಟೀಲ್ ಹಾರೂರಗೇರಿ, ತರುಣ ನಾಗಮಾರಪಳ್ಳಿ, ರಾಜಶೇಖರ ಜವಳಿ, ಶಾಂತಲಿಂಗ ಸಾವಳಗಿ, ಐಲಿಜಾನ್ ಮಠಪತಿ, ಲಲಿತಾ, ದೇವೇಂದ್ರ ಸೋನಿ, ರಾಜು ಕಡ್ಯಾಳ, ಅಭಿ ಕಾಳೆ, ಅಶೋಕ ಕೊಡಗೆ, ವಿಜಯಕುಮಾರ ಆನಂದೆ, ಸಿದ್ರಾಮಪ್ಪ ವಂಕೆ, ಶಿವಪುತ್ರ ಮಾಳಗೆ ಇತರರಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಖಂಡ್ರೆ ಏನು ಮಾಡಿದ್ದಿರಿ?: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಚಿವ ಈಶ್ವರ ಖಂಡ್ರೆ ಏನು ಮಾಡಿದ್ದಾರೆ ಎಂದು ನಿಖಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಜಿಲ್ಲೆಯ ಜನತೆ ಖಂಡ್ರೆ ಅವರಿಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಆದರೆ ಅವರು ಮಂತ್ರಿಯಾಗಿ ತವರು ಜಿಲ್ಲೆಗಾಗಿ ಎಷ್ಟು ಅನುದಾನ ತಂದಿದ್ದಾರೆ? ಬೀದರ್ ಸಹಕಾರ ಸಕ್ಕರೆ (ಬಿಎಸ್‌ಎಸ್‌ಕೆ) ಕಾರ್ಖಾನೆಗೆ ಕುಮಾರಸ್ವಾಮಿ ಸಿಎಂ ಇದ್ದಾಗ ೨೦ ಸಾವಿರ ಕೋಟಿ ರೂ. ನೀಡಿ ಕಾರ್ಖಾನೆ ಆರಂಭಿಸಿದರು. ಆದರೆ ಇದೀಗ ಮತ್ತೆ ಬಂದ್ ಆಗಿದೆ. ಇದರ ಬಗ್ಗೆ ಖಂಡ್ರೆ ಏಕೆ ಚರ್ಚೆ ಮಾಡಲ್ಲ ಎಂದರು.
ಕ್ರಾಂತಿ ಇಲ್ಲ, ಕೊನೆಗೆ ಶಾಂತಿ ಮಾತ್ರ: ನವೆಂಬರ್, ಡಿಸೆಂಬರ್ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಕ್ರಾಂತಿ ನಡೆಯಲ್ಲ, ವಾಂತಿಯೂ ಆಗುವುದಿಲ್ಲ. ಕೊನೆಗೆ ಶಾಂತಿ ಆಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್‌ನವರಿಗೆ ಅಧಿಕಾರ ಬೇಕು. ಇನ್ನುಳಿದ ಮೂರು ವರ್ಷದಲ್ಲಿ ಯಾವ ಇಲಾಖೆಯಲ್ಲಿ ಯಾವ ಹಗರಣ ಮಾಡುತ್ತಾರೆ ಎನ್ನುವುದು ನೋಡಬೇಕಾಗಿದೆ ಎಂದರು.
ಬಿಎಸ್‌ಎಸ್‌ಕೆ ನಾವೇ ಆರಂಭಿಸುತ್ತೇವೆ: ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಬಂದ್ ಮಾಡಲಾಗಿದೆ. ಮುಂದೆ ಅಧಿಕಾರಕ್ಕೆ ಬರುವ ಜೆಡಿಎಸ್ ಸರ್ಕಾರವೇ ಈ ಕಾರ್ಖಾನೆಯನ್ನು ಆರಂಭಿಸಲಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಕುಮಾರಸ್ವಾಮಿ ಸ್ವಾಮಿ ಆಗಿದ್ದ ವೇಳೆ ೨೦ ಕೋಟಿ ರೂ. ಅನುದಾನ ಒದಗಿಸಿ ಬಂದ್ ಆಗಿದ್ದ ಬಿಎಸ್‌ಎಸ್‌ಕೆ ಆರಂಭಿಸಲಾಯಿತು. ಇದೀಗ ಮತ್ತೆ ಕೃಷಿಂಗ್ ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರ ೫೦ ಕೋಟಿ ರೂ. ಅನುದಾನ ಒದಗಿಸಿ ಕಾರ್ಖಾನೆ ಆರಂಭಿಸಬೇಕು. ಆದರೆ ಈ ಸರ್ಕಾರಕ್ಕೆ ರೈತರ ಬಗ್ಗೆ ಯೋಜನೆ ಇಲ್ಲ ಎಂದ ಅವರು, ಸಾಲದ ಹಿನ್ನೆಲೆಯಲ್ಲಿ ಮಾರಾಟ ಮಾಡುವುದು, ಗುತ್ತಿಗೆಗೆ ಕೊಡುವ ವಿಚಾರ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೆ ಮಾರಾಟ ಮಾಡಬಾರದು ಎಂದರು. ಗ್ಯಾರಂಟಿ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಪತಿಯ ಜೇಬಿಗೆ ಕತ್ತರಿ ಹಾಕಿ ಪತ್ನಿಗೆ ಎರಡು ಸಾವಿರ ರೂ. ಕೊಡುತ್ತಿದೆ. ನಾನಾ ತೆರಿಗೆಗಳನ್ನು ಹೆಚ್ಚಳ ಮಾಡಿ ಜನರ ಮೇಲೆ ಭಾರ ಹಾಕಿದೆ. ಈ ಸರ್ಕಾರದ ವೈಫಲ್ಯ ಜನರಿಗೆ ತಿಳಿಸಿ ಜಾಗೃತಗೊಳಿಸಬೇಕು ಎಂದು ಹೇಳಿದರು.
ನಿಖಿಲ್ ಕಲ್ಯಾಣದಿಂದ ಸ್ಪರ್ಧಿಸಲಿ: ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಿಂದ ಬರುವ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕು. ಇದಕ್ಕಾಗಿ ನಾನು ಸ್ಥಾನ ತ್ಯಾಗ ಮಾಡುವೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ಕುಮಾರಸ್ವಾಮಿ ನೇರವಾಗಿ ಮುಖ್ಯಮಂತ್ರಿ ಆಗಿದ್ದರು. ಅದೇ ರೀತಿ ನಿಖಿಲ್ ಕುಮಾರಸ್ವಾಮಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಕೇಂದ್ರ ಸರ್ಕಾರದ ನಿಗಮ, ಮಂಡಳಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಅವರಿಗೆ ಸ್ಥಾನ ಒದಗಿಸಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ಶಕ್ತಿ ನೀಡಬೇಕು ಎಂದರು.
ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭವಲ್ಲ. ಈ ಹಿಂದೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಎಸ್.ಬಂಗಾರಪ್ಪ ಅವರು ಪಕ್ಷ ಸ್ಥಾಪಿಸಿ ಕೊನೆಗೆ ರಾಷ್ಟ್ರೀಯ ಪಕ್ಷದೊಂದಿಗೆ ವಿಲಿನ ಮಾಡಿಕೊಂಡರು. ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸಿ ೨೦೨೮ಕ್ಕೆ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ.
| ಸುರೇಶ ಗೌಡ ಮಾಜಿ ಶಾಸಕ
ಬೀದರ್ ಎರಡು ರಾಜ್ಯಗಳ ಗಡಿಗಳಿಗೆ ಹೊಂದಿಕೊAಡಿರುವ ಜಿಲ್ಲೆ. ಉದ್ಯೋಗಕ್ಕಾಗಿ ಬೇರೆ ನಗರಗಳಿಗೆ ವಲಸೆ ಹೋಗುವ ಸ್ಥಿತಿ ಇಲ್ಲಿದೆ. ಹೀಗಾಗಿ ಬೃಹತ್ ಕೈಗಾರಿಕೆ ಸ್ಥಾಪನೆಗಾಗಿ ಕೇಂದ್ರ ಹಾಗೂ ಸಚಿವ ಕುಮಾರಸ್ವಾಮಿ ಮೇಲೆ ಒತ್ತಡ ತಂದು ಇಲ್ಲಿನ ನಿರುದ್ಯೋಗಿಗಳ ನೆರವಿಗೆ ಬರಬೇಕು.
| ಸೂರ್ಯಕಾಂತ ನಾಗಮಾರಪಳ್ಳಿ ಮುಖಂಡ