ಯಾದಗಿರಿ: ಶೀಘ್ರದಲ್ಲೇ ಸಾರಿಗೆ ಸಂಸ್ಥೆಗೆ ೨,೦೦೦ ಹೊಸ ಬಸ್ ಖರೀದಿಸುತ್ತಿದ್ದು, ಅದರಲ್ಲಿ ೭೦೦ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಗುರುಮಠಕಲ್ ಮತಕ್ಷೇತ್ರದ ಮಾಧ್ವಾರ ಗ್ರಾಮದಲ್ಲಿ ೫೦ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದ್ದು, ಜನದಟ್ಟಣೆ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ ಖರೀದಿಸಲಾಗುವುದು ಎಂದರು.
ರಸ್ತೆ ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ೧೦,೦೦೦ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅನುಕಂಪ ಆಧಾರಿತ ೧,೦೦೦ ಹುದ್ದೆಗಳ ನೇಮಕಾತಿ ಹಾಗೂ ೯೦೦೦ ಚಾಲಕರ, ನಿರ್ವಾಹಕರ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ದೊರೆತ ತಕ್ಷಣ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದರು.
ಸೈದಾಪುರಕ್ಕೆ ಬಸ್ ನಿಲ್ದಾಣದ ಅವಶ್ಯಕತೆ ಕುರಿತು ಸಂಸದರು ಮತ್ತು ಶಾಸಕರು ತಮ್ಮ ಗಮನಕ್ಕೆ ತಂದಿದ್ದು, ಸಂಸದರ,ಶಾಸಕರ ನಿಧಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಥವಾ ಸಾರಿಗೆ ಸಂಸ್ಥೆ ನಿಗಮದ ಅನುದಾನದಡಿ ಈ ವರ್ಷದಲ್ಲಿ ತಲಾ ೨.೫ ಕೋ.ರೂಗಳಂತೆ ಅನುದಾನ ಒದಗಿಸಿ, ೫ ಕೋ.ರೂ.ವೆಚ್ಚದಲ್ಲಿ ಹೈಟೆಕ್‌ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಸೈದಾಪುರ ಬಸ್ ಡಿಪೋ ಬೇಡಿಕೆ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಮಾತನಾಡಿ, ಗ್ರಾಮದಲ್ಲಿ ಬಸ್ ನಿಲ್ದಾಣದ ಅವಶ್ಯಕತೆ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ವೇದಿಕೆಯಲ್ಲಿದ್ದರು. ಶರಣಕುಮಾರ ವಟಾರ ಪ್ರಾರ್ಥಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ್ ಚಂದರಗಿ ಸ್ವಾಗತಿಸಿದರು. ಗುರುಪ್ರಸಾದ ವೈದ್ಯ ನಿರೂಪಣೆ ಮಾಡಿದರು.
ಹೆಸರಿಡಲು ವರದಿ ಪಡೆದು ಪರಿಶೀಲನೆ: ಬಸ್ ನಿಲ್ದಾಣಗಳಿಗೆ ದೇಶದ ಮಹನಿಯರ ಹೆಸರು ನಾಮಕರಣ ಮಾಡುವ ಹಿನ್ನೆಲೆಯಲ್ಲಿ ಯಾದಗಿರಿ ಕೇಂದ್ರ ಬಸ್ ನಿಲ್ದಾಣಕ್ಕೆ ಮೈಲಾರ ಮಲ್ಲಯ್ಯ ಹಾಗೂ ಗುರುಮಠಕಲ್ ಬಸ್‌ನಿಲ್ದಾಣಕ್ಕೆ ಖಾಸಾಮಠ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಯಾದಗಿರಿ ನಿಲ್ದಾಣಕ್ಕೆ ಮೈಲಾರಲಿಂಗೇಶ್ವರ ಹೆಸರಿಡಿ: ಗುರುಮಠಕಲ್ ಮತಕ್ಷೇತ್ರದ ಸೈದಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣಕ್ಕೆ ಬೇಕಾದ ಅನುದಾನ ಸರ್ಕಾರ ಇಲ್ಲವೇ ಕೆಕೆಆರ್‌ಟಿಸಿ ಒದಗಿಸಬೇಕು. ಶೈಕ್ಷಣಿಕವಾಗಿ ಕೊಣೇ ಜಿಲ್ಲೆಯಾದ ಯಾದಗಿರಿ ಮಕ್ಕಳು ಸಕಾಲಕ್ಕೆ ಶಾಲೆಗಳಿಗೆ ತೆರಳಲು ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕು. ಗುಜರಿಗೆ ಹಾಕುವ ಬಸ್‌ಗಳನ್ನು ಹಳ್ಳಿಗಳಿಗೆ ಓಡಿಸುವುದನ್ನು ನಿಲ್ಲಿಸಿ ಹೊಸ ಬಸ್ ಕೊಡಬೇಕೆಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು. ಈ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಯಾದಗಿರಿ ಹೊಸ ಬಸ್ ನಿಲ್ದಾಣಕ್ಕೆ ಮೈಲಾರಲಿಂಗೇಶ್ವರ ಹೆಸರು ಮತ್ತು ಗುರುಮಠಕಲ್ ನಿಲ್ದಾಣಕ್ಕೆ ಖಾಸಾಮಠದ ಹೆಸರು ನಾಮಕರಣ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಗಡಗಡ ನಡುಗುತ್ತಾರೆ ಬಿಜೆಪಿ ಸಂಸದರು: ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ಮಾತಾಡಬೇಕೆಂದರೆ ಗಡಗಡ ನಡುಗುತ್ತಾರೆ. ಇಂತಹವರು ರಾಜ್ಯದ ಅಭಿವೃದ್ಧಿ ಬಗ್ಗೆ ಏನು ಮಾತಾಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವೇ ಪೆಟ್ರೋಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಮೊದಲು ಆ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡಲಿ. ಅದು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಸಿಎಂ-ಡಿಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಲ್ಲ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.೧ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಗ್ಗೆ ಹೇಳಿದ್ದಾರೆ ವಿನಃ ಕಾಂಗ್ರೆಸ್ ಸರ್ಕಾರದ್ದಲ್ಲ ಎಂದರು.
ಹಿಂದುಳಿದ ಈ ಭಾಗದಲ್ಲಿ ಸಾರಿಗೆ ಸಂಪರ್ಕ ಹೆಚ್ಚಿಸಬೇಕು. ಗುರುಮಠಕಲï ಬಸ್ ನಿಲ್ದಾಣಕ್ಕೆ ಖಾಸಾಮಠದ ಹೆಸರಿಡಬೇಕು. ಸೈದಾಪುರಗೆ ಹೈಟೆಕ್ ಬಸ್ ನಿಲ್ದಾಣ ಮಂಜೂರಿಗೆ ಕ್ರಮ ಕೈಗೊಳ್ಳಬೇಕು. ಬೇಡಿಕೆಯಂತೆ ಹೆಚ್ಚಿನ ಬಸ್‌ಗಳ ಸಂಚಾರ ಆರಂಭಿಸಬೇಕು.
| ರಾಧಾಕೃಷ್ಣ ದೊಡ್ಡಮನಿ ಕಲಬುರಗಿ ಸಂಸದ