ಜಿಲ್ಲೆ

ಕೆಕೆಆರ್.ಡಿಬಿ ಅನುದಾನ ಸಮರ್ಪಕ ಬಳಕೆ

ಬೀದರ್: ಕಳೆದ ಬಾರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿದ್ದ 3000 ಕೋಟಿ ಅನುದಾನದಲ್ಲಿ ಶೇ.20 ವಿನಿಯೋಗವಾಗಿತ್ತು. ಪ್ರಸಕ್ತ 5000 ಕೋಟಿ ಅನುದಾನವಿದ್ದು, ಸಮರ್ಪಕ ಬಳಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಅಂಬೇಡ್ಕರ್ ವೃತ್ತ ಹತ್ತಿರದ ಸರ್ಕಾರಿ ಅಥಿತಿ ಗೃಹ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಉದ್ಘಾಟಿಸಿದ ಅವರು, ಕಳೆದ ವರ್ಷ ಕೆಕೆಆರ್.ಡಿಬಿ ಅನುದಾನದಲ್ಲಿ ಆರಂಭವಾದ ಸಾಕಷ್ಟು ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಮರು ಆರಂಭಿಸುವುದಾಗಿ ಹೇಳಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸಲು ಈ ಕಚೇರಿ ಆರಂಭಿಸಿದ್ದು, ಸಹಾಯಕ ಸಿಬ್ಬಂದಿ ನೇಮಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಜನರ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಕೆಕೆಆರ್.ಡಿಬಿಯಿಂದ ಅನುದಾನ ಕೊಡಿಸಲಾಗುವುದು. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.30 ಹೆಚ್ಚು ಮಳೆಯಾಗಿದೆ. ಇನ್ನಷ್ಟು ಸುರಿಯುವ ಮುನ್ಸೂಚನೆ ಇದ್ದು, ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಮಳೆಯಿಂದಾಗಿ ಹಾನಿಯಾದಲ್ಲಿ ತಕ್ಷಣ ಪರಿಹಾರ ಒದಗಿಸಲಾಗುವುದು. ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ್, ಡಿಸಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಲಂಗೋಟಿ, ಉಪ ಅರಣ್ಯ ಸಂರಕ್ಷಾಣಾಧಿಕಾರಿ ವಾನತಿ ಎಂ.ಎಂ., ಅಪರ ಡಿಸಿ ಶಿವಕುಮಾರ ಶೀಲವಂತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಇತರರಿದ್ದರು.