ಹಾಸನ: ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ 35ರಲ್ಲಿ ಸರ್ಕಾರದಿಂದ ರೈತರಿಗೆ ಮಂಜೂರಾಗಿರುವ ಬಗರ್ ಹುಕಂ ಸಾಗುವಳಿ ಭೂಮಿಯನ್ನು ಕೆಐಡಿಬಿಯವರು ಬಲವಂತವಾಗಿ ಭೂಸ್ವಾಧಿನ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ 35 ರಲ್ಲಿ 26 ರೈತ ಕುಟುಂಬಗಳಿಗೆ ತಲಾ 0.26 ಎಕ್ಕರೆಯಂತೆ ಕೃಷಿ ಭೂಮಿಯನ್ನು 1977 ರಲ್ಲಿ ಬಗರ್ ಹುಕುಂ ಸಾಗುವಳಿಯ ಆಧಾರದಲ್ಲಿ ಮಂಜೂರು ಮಾಡಿ ಹಂಗಾಮಿ ಸಾಗುವಳಿ ಚೀಟಿಯನ್ನು ಹಾಸನ ತಹಶೀಲ್ದಾರ್ ಕಚೇರಿಯಿಂದ ನೀಡಿಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಈ ಎಲ್ಲಾ ಕುಟುಂಬಗಳು ಈ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆದು ಸ್ವಾಧೀನದಲ್ಲಿದ್ದಾರೆ. ಪಹಣಿಗಳಲ್ಲೂ ಇವರ ಹೆಸರು ಬರುತ್ತಿವೆ. ಆದರೆ, ಇದುವರೆಗೂ ಈ ಭೂಮಿ ಪೋಡ್ ಆಗಿಲ್ಲ. ಇದೀಗ ಕೆಐಡಿಬಿಯವರು ಭೂಸ್ವಾಧಿನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
1997 ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ರೈತರು ಸ್ವಾಧೀನದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರವನ್ನು ನೀಡಿದ್ದಾರೆ. ಆದರೆ, 26 ಕುಟುಂಬಗಳಿಗೆ ಮಂಜೂರಾಗಿದ್ದ ತಲಾ 0.26 ಎಕ್ಕರೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾದೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಉಳಿಕೆ ಭೂಮಿಯನ್ನೂ ತಮಗೆ ಸೇರಬೇಕೆಂದು ರೈತರಿಗೆ ದೌರ್ಜನ್ಯ ನಡೆಸಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು, ಇದನ್ನು ರೈತರು ಪ್ರತಿಭಟಿಸಿ ತಡೆದಿದ್ದರೆ. ಹಾಗಾಗಿ ರೈತರು ಈಗಲೂ ಅನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೆ ಮಾಡಿ, ಗಡಿಗಳನ್ನು ಗುರುತಿಸಿ, ಹದ್ದುಬಸ್ತ್ ಮೂಲಕ ಪೋಡಿ ಮಾಡಿಕೊಡಬೇಕು ಮತ್ತು ಅನಗತ್ಯವಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರೈತರಿಗೆ ತೊಂದರೆ ಕೊಡದಂತೆ ಸೂಚಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಕಾರ್ಯದರ್ಶಿ ವಸಂತ ಕುಮಾರ್, ಜಯಲಕ್ಷ್ಮಿ, ಮೂರ್ತಿ, ಶ್ರೀನಿವಾಸ್, ರಾಜೇಶ್, ಜಯಮ್ಮ, ಪ್ರಕಾಶ್ಮ ಹರೀಶ್ ಹಾಜರಿದ್ದರು.