ಜಿಲ್ಲೆ

ಕೆಐಎಡಿಬಿ ಭೂ ಸ್ವಾಧೀನ ವಿರುದ್ಧ ರೈತರ ಹೋರಾಟ

ಬೆಂಗಳೂರು ಗ್ರಾಮಾಂತರ ಡೆಸ್ಕ್

ವಿಜಯವಾಣಿ ಸುದ್ದಿಜಾಲ ಆನೇಕಲ್

ಕೆಐಎಡಿಬಿಯು ಕೃಷಿ ಭೂಮಿಗಳ ಮೇಲೆ ಹೊರಡಿಸಿರುವ ಭೂ ಸ್ವಾಧೀನ ಆದೇಶ ವಾಪಾಸ್ ಪಡೆಯಲು ಆಗ್ರಹಿಸಿ ತಾಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಸರ್ಜಾಪುರ ಹೋಬಳಿಯ ಹಂದೇನಹಳ್ಳಿಯಿಂದ ತಾಲೂಕು ಕಚೇರಿವರೆಗೆ ಸಾವಿರರಾರು ರೈತರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೈಕ್ ರ‌್ಯಾಲಿ ಮೂಲಕ ರೈತರು ಪ್ರತಿಭಟನೆ ನಡೆಸಿದ್ದರಿಂದ ಕೊಮ್ಮಸಂದ್ರ, ಚಂದಾಪುರ, ಸೂರ್ಯಾಸಿಟಿ ಮತ್ತು ಆನೇಕಲ್ ಭಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಎಸ್ಪಿ ನಾಗೇಶ್ ಕುಮಾರ್, ಡಿವೈಎಸ್ಪಿ ಮೋಹನ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ತಿಪ್ಪೇಸ್ವಾಮಿ ನವೀನ್ ಕುಮಾರ್, ಸಂಜೀವ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚಂದಾಪುರ-ಆನೇಕಲ್ ಮಾರ್ಗದಲ್ಲಿ ಟ್ರಾಫಿಕ್ ಜಾಂ ಆಗದಂತೆ ಕ್ರಮ ವಹಿಸಲಾಗಿತ್ತು.

ರೈತ ಮುಖಂಡ ಚಂದ್ರಾರೆಡ್ಡಿ ಮಾತನಾಡಿ, ರೈತರ ಹಿತ ಕಾಪಾಡಬೇಕಾದುದ್ದು ಸರ್ಕಾರಗಳ ಜವಾಬ್ದಾರಿ. ಆದರೆ, ರೈತರ ಭೂಮಿಯನ್ನು ಕಿತ್ತುಕೊಳ್ಳುಕೊಳ್ಳುತ್ತಿರುವುದು ದುರಂತ. ಕೈಗಾರಿಕೆಗಳ ಅಭಿವೃದ್ಧಿಗಾಗಿ ರೈತರನ್ನು ಬಲಿ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾವಿರಾರು ಮಂದಿ ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಪ್ರಾಣ ಕೊಟ್ಟೆವು ಯಾವುದೇ ಕಾರಣಕ್ಕೂ ಒಂದು ಅಡಿ ಭೂಮಿಯನ್ನು ಮಾತ್ರ ನೀಡುವುದಿಲ್ಲ ಎಂದು ಧ್ವನಿ ಎತ್ತಿದರು. ಮುಖಂಡ ರಾಮಸ್ವಾಮಿರೆಡ್ಡಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ದರೋಡೆ ಮಾಡುವುದು ಬೇಡ. ಬರುಡು ಭೂಮಿಗಳಲ್ಲಿ ಕೈಗಾರಿಕೆ ಮಾಡಿ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ರೈತರ ವಿರೋಧವಿದೆ. ಕೈಗಾರಿಕೆಗಳನ್ನು ನಡೆಸಬೇಕು ಎಂಬುದು ನಿಮ್ಮ ದೃಷ್ಟಿ ಇದ್ದರೆ ಚಿತ್ರದುರ್ಗ, ಕಲಬುರಗಿ, ಕೋಲಾರಗಳಲ್ಲಿ ಮಾಡಿ, ಇದರಿಂದಾಗಿ ಅಲ್ಲಿನ ಜನರಿಗೂ ಅನುಕೂಲವಾಗಲಿದೆ. ಆದರೆ, ಹಣ ಮಾಡಲು ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಹೋರಾಟದ ಎಚ್ಚರಿಕೆ: ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರು. ರೈತರ ಕೃಷಿ ಭೂಮಿ ಇದು. ಸರ್ಕಾರ ಒಂದು ನಿರ್ಧಾರಕ್ಕೆ ಬಾರದೆ ಹೋದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಮಾಡುವುದಾಗಿ ಪ್ರತಿಭಟನಾನಿರತ ರೈತರು ಎಚ್ಚರಿಕೆ ಸಂದೇಶ ರವಾನಿಸಿದರು.