ಕಾರವಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳನ್ನು ರಾಜ್ಯ ಸರ್ಕಾರದ ಜತೆ ವಿಲೀನ ಮಾಡಬೇಕು ಎಂದು ಆಗ್ರಹಿಸಿ ಸಂಸ್ಥೆಯ ನೌಕರರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಮೂಲಕ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಸಲ್ಲಿಸಿದರು.
ನೌಕರರು ಹಬ್ಬ, ಹರಿದಿನಗಳಲ್ಲೂ ರಜೆ ಇಲ್ಲದೇ ಜನರ ಸೇವೆಗಾಗಿ ದುಡಿಯುತ್ತ, ದೇಶದ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಕೆಎಸ್ಆರ್ಟಿಸಿಗೆ ಹೆಸರು ಬರಲು ಕಾರಣರಾಗಿದ್ದಾರೆ. ಆದರೆ, ಇವರಿಗೆ ಸರ್ಕಾರಿ ನೌಕರರಿಗಿಂತ ಶೇ.40 ರಷ್ಟು ಕಡಿಮೆ ವೇತನವಿದೆ. ಸಾರಿಗೆ ನೌಕರರು ಪ್ರತಿ ದಿನ ದೂರದೂರುಗಳಿಗೆ ಪ್ರಯಾಣ ಮಾಡಬೇಕಾದ ಕಾರಣ ಬೇಗನೆ ಅನಾರೋಗ್ಯಕ್ಕೊಳಗಾಗುತ್ತಾರೆ. ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಸೌಲಭ್ಯ ಇವರಿಗಿಲ್ಲ. ಈ ಕುರಿತು ಜನಪ್ರತಿನಿಧಿಗಳಿಗೆ ನಿರಂತರವಾಗಿ ಮನವಿ ಮಾಡಿದ ಪರಿಣಾಮ ಈ ಬಗ್ಗೆ ಅಧ್ಯಯನ ಮಾಡಲು ಸಂಸ್ಥೆಯ ನಾಲ್ಕು ವಿಭಾಗಗಳಿಗೆ ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರಿರುವ ಸಮಿತಿ ರಚಿಸಲಾಗಿದೆ. ಆದರೆ, ಸಮಿತಿಯ ಎಷ್ಟು ದಿನದಲ್ಲಿ ವರದಿ ಸಲ್ಲಿಸಬೇಕು ಎಂಬ ಕಾಲಮಿತಿ ನಿಗದಿ ಮಾಡಿಲ್ಲ. ಇದರಿಂದ ಆತಂಕ ಉಂಟಾಗಿದೆ ಎಂದು ಸಮಸ್ಯೆ ತೋಡಿಕೊಂಡರು. ಸಮಿತಿಗೆ ಕಾಲಮಿತಿ ನಿಗದಿ ಮಾಡಬೇಕು. ಕೆಎಸ್ಆರ್ಟಿಸಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಲದ ಕೆ.ಆರ್. ಮುಕುಂದನ್, ಪ್ರಕಾಶ ಮೂರ್ತಿ, ಸಂಜೀವ ಶೆಟ್ಟಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾಶಿನಾಥ ಕಾನಡೆ, ಜೆ.ಕೆ. ಆನಂದ, ಪ.ಜಾತಿ, ವರ್ಗಗಳ ನೌಕರರ ಸಂಘದ ಎಚ್. ಫಕೀರಪ್ಪ, ಎಂ.ಕೆ. ಪ್ರಧಾನಿ, ಕಾರ್ವಿುಕರ ಮೂಲ ಹಕ್ಕು ವಿಚಾರ ವೇದಿಕೆಯ ಎಸ್.ಎಸ್. ಮರಾಠೆ, ಮಣಿಕಂಠ ಇತರರು ಇದ್ದರು.</