ಮಾರುತಿ ಪ್ರಸನ್ನಕುಮಾರ್ ಮಧುಗಿರಿ
ರಾಜ್ಯ ರಸ್ತೆ ಸಾರಿಗೆ ನಿಗಮವು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶಿಸ್ತು ಹಾಗೂ ಗೈರುಹಾಜರಿ ಪ್ರಕರಣಗಳನ್ನು ಒಂದೇ ಬಾರಿಗೆ ಮಾತ್ರ ಅನ್ವಯಿಸುವಂತೆ ತನ್ನ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಕೆಎಸ್ಆರ್ಟಿಸಿ ನಿಗಮದಲ್ಲಿ 35 ಸಾವಿರಕ್ಕೂ ಹೆಚ್ಚು ಚಾಲಕ, ನಿರ್ವಾಹಕ, ಚಾಲಕ -ಕಂ -ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ನಿಗಮದಲ್ಲಿ ವಿವಿಧ ಪ್ರಕರಣಗಳಲ್ಲಿ ಶಿಸ್ತು ಕ್ರಮ ಎದುರಿಸುತ್ತಿರುವ ಸುಮಾರು 8414 ಪ್ರಕರಣಗಳಲ್ಲಿ 7200 ಪ್ರಕರಣಗಳು ಹಾಗೂ ವಿವಿಧ ವಿಭಾಗಗಳಲ್ಲಿ ಬಾಕಿ ಇರುವ ಸುಮಾರು 481 ದೀರ್ಘಾವಧಿ ಗೈರು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯವಾಗುವಂತೆ ಲಘು ಕ್ರಮಗಳ ಮೂಲಕ ಇತ್ಯರ್ಥ ಮಾಡಲು ತೀಮಾರ್ನಿಸಲಾಗಿದೆ. ಉಳಿದ 1214 ಗಂಭೀರ ಪ್ರಕರಣಗಳಾಗಿದ್ದು, ಅವುಗಳನ್ನು ತ್ವರಿತ ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ.
ಅತೀ ಕಡಿಮೆ ದಂಡ ಪ್ರಕ್ರಿಯೆ: ಘಟಕ ಹಾಗೂ ವಿಭಾಗ ಮಟ್ಟದಲ್ಲಿ 10 ತಿಂಗಳ ಅವಧಿಗಿಂತ ಕಡಿಮೆ ಹಾಜರಿ ಪ್ರಕರಣಗಳಲ್ಲಿ ಗೈರುಹಾಜರಿ ಅವಧಿಯನ್ನು ಗೈರು ಎಂದೇ ಪರಿಗಣಿಸಿ ಕೇವಲ 500 ರೂಪಾಯಿ ಒಳಗಿನ ಮೊತ್ತವನ್ನು ವೇತನದಿಂದ ಕಡಿತಗೊಳಿಸಿ ಪ್ರಕರಣವನ್ನು ಇತ್ಯರ್ಥ ಪಡಿಸಲು, 10 ತಿಂಗಳಗಿಂತ ಹೆಚ್ಚಿನ ಅವಧಿಯ ಅನಧಿಕೃತ ಗೈರು ಪ್ರಕರಣಗಳಲ್ಲಿ ಬಾಕಿ ಇರುವ ಹಂತದಿಂದ ನಿಯಮಾವಳಿಯನ್ನು ಮುಂದುವರಿಸಿ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ತಿಳಿಸಲಾಗಿದೆ.
ಇನ್ನು ಶಿಸ್ತು ಪ್ರಕರಣಗಳನ್ನು ಪರಿಶೀಲಿಸಿ ತಪ್ಪಿತಸ್ಥ ಪ್ರಕರಣಗಳಲ್ಲಿ ಘಟಕ ಮಟ್ಟದಲ್ಲಿ 100 ರೂ., ವಿಭಾಗ ಮಟ್ಟದಲ್ಲಿ 500 ರೂ. ಒಳಗೆ ದಂಡ ವಿಧಿಸಿ ದಂಡದ ಹಣವನ್ನು ವೇತನದಿಂದ ಕಡಿತಗೊಳಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೃಗೊಳ್ಳಲಾಗಿದೆ. ಈ ಪ್ರಕರಣಗಳು ಕನಿಷ್ಠ 25000 ರೂ. ದಂಡ ವಿಧಿಸಬಹುದಾದ ಪ್ರಕರಣಗಳಾಗಿದ್ದವು ಎಂಬುದು ಗಮನಾರ್ಹ.
ಬಾಕಿ ಇರುವ ಶಿಸ್ತು ಪ್ರಕರಣಗಳ ವಿವರ: ಬೆಂಗಳೂರು ಕೇಂದ್ರ ವಿಭಾಗ : 441, ರಾಮನಗರ : 445, ಕೋಲಾರ : 398, ತುಮಕೂರು : 628, ದಾವಣಗೆರೆ : 165, ಮೈಸೂರು : 1346, ಮಂಡ್ಯ : 680, ಹಾಸನ : 263, ಚಿಕ್ಕಮಗಳೂರು : 565, ಮಂಗಳೂರು : 686, ಬೆಂಗಳೂರು ಪ್ರಾದೇಶಿಕ ಕಾರ್ಯಾಗಾರ 17, ಹಾಸನ ಪ್ರಾದೇಶಿಕ ಕಾರ್ಯಾಗಾರ: 7, ಚಿಕ್ಕಬಳ್ಳಾಪುರ : 1049, ಚಾಮರಾಜನಗರ : 343, ಪುತ್ತೂರು : 544, ಕೆಂ.ಬ.ನಿ. ವಿಭಾಗ : 12, ಶಿವಮೊಗ್ಗ : 404, ಚಿತ್ರದುರ್ಗ : 421 ಒಟ್ಟು : 8414 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.
ಬಾಕಿ ಇರುವ ಗೈರು ಹಾಜರಿ ಪ್ರಕರಣ: ಬೆಂ.ಕೇ.ವಿಭಾಗ : 25, ರಾಮನಗರ : 20, ಕೋಲಾರ : 27, ತುಮಕೂರು : 55, ದಾವಣಗೆರೆ : 12, ಮೃಸೂರು : 96, ಮಂಡ್ಯ : 13, ಹಾಸನ : 22, ಚಿಕ್ಕಮಗಳೂರು : 8, ಮಂಗಳೂರು : 23, ಬೆಂ.ಪ್ರಾ.ಕಾ.ಗಾರ 1, ಹಾಸನ ಪ್ರಾದೇಶಿಕ ಕಾರ್ಯಾಗಾರ: 0, ಚಿಕ್ಕಬಳ್ಳಾಪುರ : 38, ಚಾಮರಾಜನಗರ : 14, ಪುತ್ತೂರು : 20, ಕೆಂ.ಬ.ನಿ.ವಿಭಾಗ : 0, ಶಿವಮೊಗ್ಗ : 21, ಚಿತ್ರದುರ್ಗ : 86 ಒಟ್ಟು : 481 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.
ನೌಕರರಿಗೆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಿರುವುದು ಸುವರ್ಣಾವಕಾಶ. ನಿಗಮವು ನೌಕರರ ಹಿತ ಕಾಯುತ್ತಿರುವುದರಿಂದ ಬಹುತೇಕ ಸಹೋದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಸಂಸ್ಥೆ ಋಣ ತೀರಿಸಬೇಕಿದೆ. - > ಶಿವಕುಮಾರ್, ಚಾಲಕ- ಕಂ-ನಿರ್ವಾಹಕ. ವಿವಿಧ ಪ್ರಕರಣಗಳಲ್ಲಿ ಸಿಲುಕಿ ಹೈರಾಣಾಗಿರುವ ಬಹಳಷ್ಟು ನೌಕರರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸರ್ಕಾರಿ ನೌಕರರಿಗೆ ನೀಡುವ ವೇತನವನ್ನೇ ನೀಡಲು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ವೇತನ ಪರಿಷ್ಕರಣೆಯ ಬಗ್ಗೆಯೂ ಇದೇ ಕ್ರಮ ಕೈಗೊಳ್ಳವ ಭರವಸೆಯಿದೆ. - > ಬಸವರಾಜು, ಜಿಲ್ಲಾಧ್ಯಕ್ಷ, ಅಖಿಲ ಕರ್ನಾಟಕದ ರಸ್ತೆ ಸಾರಿಗೆ ನೌಕರರ ಸಂ, ತುಮಕೂರು ನೌಕರರು ಸಂತೋಷವಾಗಿದ್ದರೆ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯ. ಇದನ್ನು ಮನಗಂಡು ಸಾರಿಗೆ ಸಂಸ್ಥೆ ಎಂಡಿಯವರ ಆದೇಶದಂತೆ ಜಿಲ್ಲೆಯಲ್ಲಿ ಬಾಕಿ ಇದ್ದ 950ಕ್ಕೂ ಹೆಚ್ಚು ಪ್ರಕರಣಗಳನ್ನು ಏಕಕಾಲಕ್ಕೆ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಗಿದೆ. > ಕೆ.ಆರ್. ಬಸವರಾಜು, ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು. ಪ್ರತಿ ಬಾರಿಯೂ ದಂಡ ಪ್ರಯೋಗ ಸಮರ್ಪಕ ಕ್ರಮವಲ್ಲ. ಅಲ್ಲದೇ ನಿಗಮವನ್ನು ಇನ್ನೂ ಆರ್ಥಿಕವಾಗಿ ಸದೃಢಗೊಳಿಸಿ ಅಭಿವೃದ್ಧಿಯತ್ತ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿವಿಧ ಹಂತಗಳಲ್ಲಿ ನೌಕರರ ವಿರುದ್ಧ ಬಾಕಿ ಇರುವ ಶಿಸ್ತು ಹಾಗೂ ಗೈರು ಪ್ರಕರಣಗಳನ್ನು ನಿಗಮದ ವ್ಯವಸ್ಥಾಪಕರಿಗಿರುವ ಅಧಿಕಾರವನ್ನು ಬಳಸಿ ಒಂದೇ ಬಾರಿಗೆ ಅನ್ವಯಿಸುವಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮಕೃಗೊಳ್ಳಲಾಗಿದೆ. > ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್ಆರ್ಟಿಸಿ