ಜಿಲ್ಲೆ

ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಬೆಂಕಿ

ಕೊಳ್ಳೇಗಾಲ: ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆಗೆ ಪ್ರಯಾಣಿಕರನ್ನು ಕರೆತರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಚಾಲಕ ಹಾಗೂ ಬಸ್ ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಬೆಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತು ಕರೆತರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಧ್ಯಾಹ್ನ 12.30ರ ಸಮಯದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಂದು ನಿಲುಗಡೆಗೊಂಡಿದೆ. ಈ ವೇಳೆ ಪ್ರಯಾಣಿಕರು ಇಳಿದಿದ್ದಾರೆ. ನಂತರ, ಬಸ್ ನಿಲ್ದಾಣಕ್ಕೆ ಹೊರಡುತ್ತಿದ್ದಂತೆ ಇದ್ದಕ್ಕಿದ್ದಂತೆ ಬಸ್ ಎಂಜಿನ್ ಬಳಿ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದೆ.

ಗಾಬರಿಗೊಂಡ ಪ್ರಯಾಣಿಕರು ಹೌಹಾರಿ ಬಸ್‌ನಿಂದ ಕೆಳಕ್ಕೆ ಇಳಿದಿದ್ದಾರೆ. ಈ ವೇಳೆ ಚಾಲಕ ಹಾಗೂ ಕಂಡಕ್ಟರ್ ಇಬ್ಬರು ಬಸ್‌ನಲ್ಲಿದ್ದ ಅಗ್ನಿಶಾಮಕ ಯಂತ್ರ ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್‌ನಲ್ಲಿ ಸುಮಾರು 14 ಪ್ರಯಾಣಿಕರಿದ್ದರು ಎನ್ನಲಾಗಿದೆ.