ಯಳಂದೂರು: ಗ್ರಾಮೀಣ ಭಾಗದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲುಗಡೆ ಇರುವ ಕಡೆ ಬಸ್ ನಿಲ್ಲಿಸಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.
ಭಾನುವಾರ ತಾಲೂಕಿನ ಯರಿಯೂರು ಗ್ರಾಮದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ಈ ಗ್ರಾಮದಲ್ಲಿ ಕೆಲ ಕೆಎಸ್ಸಾರ್ಟಿಸಿ ಬಸ್‌ಗಳು ನಿಲ್ಲಿಸುತ್ತಿಲ್ಲ ಎಂಬ ದೂರಿತ್ತು. ಈ ಬಗ್ಗೆ ಸಂಬಂಧಟ್ಟ ಡಿಪೋಗಳ ಅಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿ ಬಸ್ ನಿಲ್ಲಿಸುವಂತೆ ಸೂಚನೆ ನೀಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಬೇರೆ ಊರಿಗೆ ತೆರಳಲು ಇದರಿಂದ ಅನುಕೂಲವಾಗುತ್ತದೆ. ಡಿಪೋ ಅಧಿಕಾರಿಗಳು ತಮ್ಮ ಚಾಲಕ, ನಿರ್ವಾಹಕರಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದರು.
ಇದಕ್ಕೆ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಮುಖಂಡ ಶ್ರೀನಿವಾಸ್ ಹೋರಾಟ ಮಾಡಿದ್ದಾರೆ. ಕಳೆದ 50 ವರ್ಷಗಳಿಂದಲೂ 700 ಎಕರೆ ರೈತರ ಜಮೀನಿಗೆ ತೆರಳುವ ರಸ್ತೆಯನ್ನು ಒತ್ತುವರಿ ಮಾಡಲಾಗಿದ್ದು ಇದನ್ನೂ ತೆರವುಗೊಳಿಸಲು ಇವರು ನನ್ನ ಗಮನಸೆಳೆದಿದ್ದಾರೆ ಎಂದರು. ನಂತರ ಶ್ರೀನಿವಾಸ್ ಅವರನ್ನು ಶಾಸಕರು ಸನ್ಮಾನಿಸಿದರು.
ಶ್ರೀನಿವಾಸ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಹಲವು ದಿನಗಳಿಂದ ಇಲ್ಲಿ ಬಸ್ ನಿಲ್ಲಿಸುತ್ತಿರಲಿಲ್ಲ. ಹಲವು ಬಾರಿ ನಾವು ಪ್ರತಿಭಟನೆಯನ್ನೂ ನಡೆಸಿದ್ದೆವು. ಈ ಹೋರಾಟದಲ್ಲಿ ಗ್ರಾಮದ ಎಲ್ಲ ಕೋಮಿನ ಜನರು ಸಹಕರಿಸಿದ್ದರು. ನಂತರ ಶಾಸಕರ ಗಮನಕ್ಕೆ ಈ ವಿಷಯವನ್ನು ತರಲಾಗಿ ಇವರು ಆಸಕ್ತಿ ವಹಿಸಿ ಇಲ್ಲಿ ಬಸ್ ನಿಲ್ಲಿಸುವಂತೆ ಡಿಪೋನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಲ್ಲಿ ನಿಲ್ದಾಣದ ನಾಮಫಲಕವನ್ನು ಉದ್ಘಾಟನೆ ಮಾಡಿದ್ದಾರೆ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಗ್ರಾಪಂ ಅಧ್ಯಕ್ಷೆ ಲಾವಣ್ಯ, ಉಪಾಧ್ಯಕ್ಷ ಚಿನ್ನಸ್ವಾಮಿ, ಸದಸ್ಯ ಮಹೇಶ್, ಚಿಕ್ಕಮಾದಯ್ಯ, ಯಜಮಾನ್ ಜಯಣ್ಣ, ರಂಗಸ್ವಾಮಿ, ಮಹೇಶ್, ಜಿಮ್ಮಿ, ಉಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.