ಜಿಲ್ಲೆ

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ದಾರಿಗೆ ಕೆಂಪು ಕಲ್ಲಿನ ಹಾಸು

ವಿರಾಜಪೇಟೆ: ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ವಿರಾಜಪೇಟೆ, ಗಡಿಯಾರ ಕಂಬದ ಸಮೀಪದ ರಸ್ತೆ ಹಾಗೂ ಸತ್ಯನಾರಾಯಣ ಕಾಂಪ್ಲೆಕ್ಸ್ ಮೂಲಕ ಸಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲು ದಾರಿ ಮಣ್ಣಿನ ರಸ್ತೆಯಿಂದ ಕೂಡಿತ್ತು. ಮಳೆಗಾಲದಲ್ಲಿ ಈ ರಸ್ತೆಯೂ ಕೆಸರುಗದ್ದೆಯಾಗಿ ಮಾರ್ಪಟ್ಟು ಪ್ರಯಾಣಿಕರು ನಡೆದಾಡಲು ಪ್ರಯಾಸ ಪಡುತ್ತಿದ್ದರು. ಹಲವು ಬಾರಿ ಜಾರಿ ಬಿದ್ದು ಗಾಯಗೊಂಡಿದ್ದು ಉಂಟು . ಸಮಸ್ಯೆಯನ್ನು ಅರಿತ ವಿರಾಜಪೇಟೆ, ಪುರಸಭೆ ಬಸ್ ನಿಲ್ದಾಣಕ್ಕೆ ತೆರಳುವ ಕಾಲು ದಾರಿಗೆ ಮಂಗಳವಾರ ಕೆಂಪು ಕಲ್ಲುಗಳನ್ನು ಹಾಕಿಸಿ ಜನರ ಸಂಚಾರಕ್ಕೆ ಯೋಗ್ಯವನ್ನಾಗಿಸಿದೆ.

ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಪ್ರತಿ ದಿನ ಪ್ರಯಾಣಿಕರು ಹಾಗೂ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತಿದ್ದು, ಮಳೆಗಾಲದಲ್ಲಿ ಸುಮಾರು 150 ಮೀಟರ್‌ನಷ್ಟು ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ಬಹಳ ತೊಡಕಾಗುತಿತ್ತು.

ಈ ಕುರಿತು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಸಹ ಚರ್ಚಿಸಲಾಗಿತ್ತು. ಸಮಸ್ಯೆ ಗಂಭೀರತೆ ಅರಿತ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಸಲಹೆಯಂತೆ ವಾರ್ಡ್‌ನ ಸದಸ್ಯರಾದ ಎಸ್.ಎಚ್.ಮತೀನ್ ಅವರು, ಕೇರಳದ ಕೆಂಪು ಕಲ್ಲುಗಳನ್ನು ಕಾಲು ದಾರಿಗೆ ಹಾಕಿಸಿ ಪಾದಚಾರಿಗಳಿಗೆ ನಡೆದಾಡಲು ಅನುಕೂಲ ಆಗುವಂತೆ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಎಸ್.ಎಚ್.ಮತೀನ್ ಅವರು, ಈ ರಸ್ತೆ ಖಾಸಗಿ ಸ್ಥಳವಾಗಿದ್ದು. ಹಲವು ಬಾರಿ ಪುರಸಭೆಗೆ ಸ್ಥಳ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಸ್ಥಳ ಪುರಸಭೆಯಗೆ ಹಸ್ತಾಂತರ ಮಾಡಿರುವುದಿಲ್ಲ. ಮತ್ತೊಮ್ಮೆ ಮನವಿ ಮಾಡುವ ಪ್ರಯತ್ನ ಮಾಡುತ್ತೇವೆ. ಸ್ಥಳ ದೊರಕಿದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುತ್ತದೆ . ಸದ್ಯದ ಮಟ್ಟಿಗೆ ಕೆಂಪು ಕಲ್ಲು ಬಳಸಿ ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಮಾಡಲಾಗಿದೆ ಎಂದು ತಿಳಿಸಿದರು.