ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಗ್ರಾಮೀಣ ಪ್ರದೇಶದ ವಿದ್ಯಾಸಕ್ತ ಅಭ್ಯರ್ಥಿಗಳ ಆಶಾಕಿರಣವಾಗಿದೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಡಾ.ಪಿ.ಶಿವರಾಜು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಡಿಆರ್, ಎಆರ್, ಸೂಪರಿಂಟೆಂಡೆಂಟ್, ಎಫ್‌ಡಿಎ, ಎಸ್‌ಡಿಎ ನೌಕರರಿಗೆ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿರುವ 4 ದಿನಗಳ ಆಡಳಿತಾತ್ಮಕ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿ ಆಯ್ಕೆಯಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಪ್ರಸ್ತುತ ಎ+ ಶ್ರೇಣಿ ಪಡೆದಿರುವ ಕರಾಮುವಿ ರಾಜ್ಯದ ಅತ್ಯುತ್ತಮ ವಿವಿಯಾಗಿದೆ ಎಂದರು.
ನಾನು ಸಹ ಇದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ್ದು, ಕೆಎಎಸ್ ಪರೀಕ್ಷೆ ಪಾಸ್ ಮಾಡುವಲ್ಲಿ ಈ ವಿವಿ ಕೊಡುಗೆ ಅಪಾರವಾಗಿದೆ. ಲಕ್ಷಾಂತರ ಜನರ ಔದ್ಯೋಗಿಕ ಮತ್ತು ವೈಯಕ್ತಿಕ ಏಳಿಗೆಯಲ್ಲಿ ಇದರ ಪಾತ್ರ ಅನನ್ಯ ಎಂದರು.
ವಿಶ್ವವಿದ್ಯಾಲಯದ ಉದ್ಯೋಗಿಗಳು ಕಚೇರಿ ಕಡತಗಳನ್ನು ತ್ವರಿತ ವಿಲೇವಾರಿ ಮಾಡಲು ಸಹಾಯವಾಗುವ ಈ ತರಬೇತಿಯನ್ನು ಪಡೆದುಕೊಳ್ಳಬೇಕು. ಸಿಬ್ಬಂದಿ ವರ್ಗದವರಿಗೆ ಅಗತ್ಯ ಜ್ಞಾನ ಕೌಶಲ ಲಭಿಸುವಂತಾಗಲಿ ಎಂದು ಹಾರೈಸಿದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಹೊಸತನಕ್ಕೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ಸ್ಪರ್ಧಾತ್ಮಕ ಯುಗ. ಕಾಲ ಕಾಲಕ್ಕೆ ಆಡಳಿತದಲ್ಲಿ ಬದಲಾವಣೆ ಇರುತ್ತದೆ. ಕೆಲಸಕ್ಕೆಂದು ಬರುವ ಯಾವುದೇ ಸಾರ್ವಜನಿಕರನ್ನು ಕಾಯಿಸದೆ ತ್ವರಿತವಾಗಿ ಕಡತ ವಿಲೇವಾರಿ ಮಾಡಲು ಈ ತರಬೇತಿ ಸಹಕಾರಿಯಾಗಲಿ ಎಂದು ಶುಭಕೋರಿದರು.
ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಹಣಕಾಸು ಅಧಿಕಾರಿ ಡಾ.ಎ.ಖಾದರ್‌ಪಾಷ ತರಬೇತಿ ಕುರಿತು ವಿವರಣೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿ.ರಂಗನಾಥ್, ಕೆ.ಎಲ್.ಪ್ರಕಾಶ್, ಮಧುಸೂದನ್, ಡೀನ್‌ಗಳಾದ ಪ್ರೊ.ಎನ್.ಲಕ್ಷ್ಮೀ, ಪ್ರೊ.ರಮಾನಾಥಂ ನಾಯ್ಡ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಇ-ಗವರ್ನೆನ್ಸ್ ಪ್ರೊ.ಮಹದೇವಮೂರ್ತಿ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮುಖ್ಯಸ್ಥ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.