ಜಿಲ್ಲೆ

ಕೆಎಸ್ಒಯು: ಅಂಗವಿಕಲರಿಗಾಗಿ ಬಿ.ಇಡಿ, ಎಂ.ಇಡಿ ಆರಂಭಿಸಿ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿಶೇಷ ಬಿ.ಇಡಿ ಹಾಗೂ ವಿಶೇಷ ಎಂ.ಇಡಿ ಪದವಿ ಕೋರ್ಸ್ ಆರಂಭಿಸಿ ಅಂಗವಿಕಲರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಸೂಚಿಸಿದರು.

ನಗರದಲ್ಲಿರುವ ಕರಾಮುವಿ ಕಚೇರಿಗೆ ಅಧಿಕಾರಿಗಳೊಂದಿಗೆ ಅವರು ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಮುಕ್ತ ವಿವಿ ಸ್ಟುಡಿಯೊ, ಪ್ರವೇಶಾತಿ ವಿಭಾಗ, ಅಧ್ಯಯನ ಸಾಮಗ್ರಿ ವಿಭಾಗ, ಗ್ರಂಥಾಲಯದ ವಿಭಾಗ, ಪರೀಕ್ಷಾಂಗ ವಿಭಾಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ವಿವಿ ಸಹಯೋಗದೊಂದಿಗೆ ಒಂದು ಸಮ್ಮೇಳನ ಆಯೋಜಿಸಲು ಒಪ್ಪಿದರು.

ಬಳಿಕ ಮಾತನಾಡಿದ ಅವರು, ವಿಶೇಷ ಬಿ.ಇಡಿ, ವಿಶೇಷ ಎಂ.ಇಡಿ ಪದವಿ ಕೋರ್ಸ್‌ಗಳ ಸಂಬಂಧಿಸಿದಂತೆ ವಿವಿ ವತಿಯಿಂದ ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು. ಅಂಗವಿಕಲರಿಗೆ ಸರ್ಕಾರದಿಂದ ನೀಡುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕರಾಮುವಿಯಲ್ಲಿ ಪ್ರವೇಶಾತಿ ಬಯಸಿ ಬರುವ ಅಂಗವಿಕಲರಿಗೆ ಶೇ.5ರಷ್ಟು ಮೀಸಲಾತಿಯನ್ನು ಪಿಎಚ್‌ಡಿ, ಬಿ.ಇಡಿ ಹಾಗೂ ಎಲ್ಲ ಸ್ನಾತಕ, ಸ್ನಾತಕೋತ್ತರ ಪದವಿಗಳಲ್ಲಿ ನೀಡಬೇಕೆಂದು ತಿಳಿಸಿದರು.

ವಿವಿ ಡೀನ್(ಶೈಕ್ಷಣಿಕ) ಪ್ರೊ.ಎಂ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ. ನಿರಂಜನ್ ರಾಜ್, ಕುಲಸಚಿವ(ಪರೀಕ್ಷಾಂಗ) ಪ್ರೊ.ಸಿ.ಎಸ್ ಆನಂದ್ ಕುಮಾರ್, ಡೀನ್ (ಅಧ್ಯಯನ ಕೇಂದ್ರ) ಡಾ.ಚಂದ್ರೇಗೌಡ ಇನ್ನಿತರರಿದ್ದರು.