ಸಕಲೇಶಪುರ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ಸಾರಿಗೆ ಸಂಸ್ಥೆ ಘಟಕದಲ್ಲಿರುವ ದೇಗುಲದಲ್ಲಿ ಗುರುವಾರ ಶ್ರೀ ವ್ನಿೇಶ್ವರ ಮೂರ್ತಿಗೆ ಬೆಳ್ಳಿಕವಚ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಎಸ್‌ಆರ್‌ಟಿಸಿ ನೌಕರನ ಪುತ್ರನಾಗಿರುವ ನನಗೆ ಬಾಲ್ಯದಿಂದಲೂ ಸಾರಿಗೆ ಸಂಸ್ಥೆಯ ಸ್ಥಿತಿಗತಿ ಬಗ್ಗೆ ಅರಿವಿದೆ. ಕುಟುಂಬದಿಂದ ದೂರವಾಗಿ ಹಲವು ಸಮಸ್ಯೆಗಳ ನಡುವೆ ಕೆಲಸ ಮಾಡುವ ಸಾರಿಗೆ ನೌಕರರು ನಿಜವಾಗಿಯೂ ಶ್ರಮಜೀವಿಗಳು ಎಂದರು.
ಹಾಸನ ವಿಭಾಗದಲ್ಲಿದ್ದ ಸಕಲೇಶಪುರ ಘಟಕವನ್ನು ರಾಜಕೀಯ ಉದ್ದೇಶಕ್ಕಾಗಿ ಚಿಕ್ಕಮಗಳೂರು ವಿಭಾಗಕ್ಕೆ ಸೇರಿಸಲಾಗಿದೆ. ಮತ್ತೆ ಚಿಕ್ಕಮಗಳೂರು ವಿಭಾಗದಿಂದ ಹಾಸನ ವಿಭಾಗಕ್ಕೆ ಸಕಲೇಶಪುರ ಘಟಕ ವರ್ಗಾವಣೆಗೆ ನಡೆಸಿದ ಹೋರಾಟಗಳು ವಿಫಲಗೊಂಡಿವೆ. ಮತ್ತೊಮ್ಮೆ ಘಟಕ ವರ್ಗಾವಣೆಗೆ ಸಂಬಂಧಿಸಿ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು. ಅಲ್ಲದೆ, ಡಿಪೋದಲ್ಲಿರುವ ಸಾಕಷ್ಟು ಬಸ್‌ಗಳು ದುಸ್ಥಿತಿಯಲ್ಲಿದ್ದು, ಹೊಸ ಬಸ್‌ಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗುವುದು ಎಂದರು. ಶಾಸಕ ಸಿಮೆಂಟ್ ಮಂಜು ಕುಟುಂಬಸ್ಥರನ್ನು ಸಾರಿಗೆ ಘಟಕದಿಂದ ಸನ್ಮಾನಿಸಲಾಯಿತು.
ಸಾರಿಗೆ ಸಂಸ್ಥೆ ಘಟಕದ ನೌಕರರು ಹಾಗೂ ನಿವೃತ್ತ ನೌಕರರು ಸಮಾಗಮಗೊಳ್ಳಲು ವೇದಿಕೆಯಾದ ವ್ನಿೇಶ್ವರ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಣೆ ಕಾರ್ಯಕ್ರಮ ಭಾವುಕ ಕ್ಷಣಕ್ಕೂ ಸಾಕ್ಷಿಯಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ನೌಕರರು ಹಾಗೂ ನೌಕರರು ಆಲಿಂಗನ ಮಾಡಿಕೊಳ್ಳುವುದರ ಮೂಲಕ ಆರೋಗ್ಯ, ಯೋಗಕ್ಷೇಮದ ವಿಚಾರ ವಿನಿಮಯ ಮಾಡಿಕೊಂಡರು. ನಿವೃತ್ತ ನೌಕರರು ಘಟಕದಲ್ಲಿ ಒಂದು ಸುತ್ತು ಹಾಕಿ ಬದಲಾವಣೆ ಆಗಿರುವುದನ್ನು ಕಂಡು ಸಂತಸಪಟ್ಟರು. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಹೇಳಿಕೊಂಡರು.