ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಹಾಸನ : ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಕೆಳಗೆ ಬಿದ್ದ ಸವಾರನ ಮೇಲೆ ಬಸ್ ಚಕ್ರ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ-ಮೈಸೂರು ರಸ್ತೆಯ ಎಂ.ಹೊಸಕೊಪ್ಪಲು ಬಳಿ ಬುಧವಾರ ಸಂಜೆ ನಡೆದಿದೆ. ಬೈಕ್ ಹಿಂಬದಿ ಕುಳಿತಿದ್ದ ಯುವತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿ ದೇವರಗುಡ್ಡನಹಳ್ಳಿ ಗ್ರಾಮದ ಧನಂಜಯ (30) ಮೃತ ದುರ್ದೈವಿ.

ಹಾಸನ ನಗರದ ಗೋಮತಿ ಕಲ್ಯಾಣ ಮಂಟಪದ ಹತ್ತಿರ ವಾಸವಾಗಿದ್ದ ಧನಂಜಯ ಬುಧವಾರ ಸಂಜೆ ಬೈಕ್‌ನಲ್ಲಿ ಸಂಬಂಧಿ ಕಟ್ಟಾಯ ಹೋಬಳಿಯ ಬಿಳಗುಂದ ಗ್ರಾಮದ ಭವ್ಯಶ್ರೀ ಎಂಬುವವರನ್ನು ಕೂರಿಸಿಕೊಂಡು ಊರಿಗೆ ಹೋಗುತ್ತಿದ್ದರು. ಹಾಸನ-ಮೈಸೂರು ರಸ್ತೆಯ ಎಂ.ಹೊಸಕೊಪ್ಪಲು ಬಳಿ ಪೆಟ್ರೋಲ್ ಹಾಕಿಸಲು ಬೈಕ್ ಅನ್ನು ಬಲಬದಿಗೆ ತಿರುಗಿಸಿದಾಗ ಚನ್ನಪಟ್ಟಣ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಿಂದ ಬಿದ್ದ ಧನಂಜಯ ಮೇಲೆ ಬಸ್ ಚಕ್ರ ಹತ್ತಿದ್ದರಿಂದ ತಲೆ, ಹೊಟ್ಟೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಿಂದ ಭವ್ಯಶ್ರೀ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮೃತನ ಸಂಬಂಧಿ ನಾಗರಾಜ ಹಾಸನ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.