ಡಿ.ಎಂ.ಮಹೇಶ್, ದಾವಣಗೆರೆ: ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನವ ಯೌವನದ ಸ್ಥಿತಿಗೆ ಮರಳುತ್ತಿದೆ. 1988ರ ಡಿಸೆಂಬರ್‌ನಲ್ಲಿ ನಿಲ್ದಾಣ ನಿರ್ಮಾಣವಾಗಿತ್ತು. ಎರಡು ವರ್ಷದ ಹಿಂದೆ ತೆರವಾಗಿದ್ದ ಹಳೆಯ ಕಟ್ಟಡ, ಮೂವತ್ತೈದು ವರ್ಷದ ಬಳಿಕ ಹೊಸ ಚಹರೆ ಪಡೆದುಕೊಳ್ಳುತ್ತಿದೆ! ಸ್ಮಾರ್ಟ್‌ಸಿಟಿ ಮತ್ತು ಸಾರಿಗೆ ನಿಗಮ ಸೇರಿ ಒಟ್ಟು 120 ಕೋಟಿ ರೂ.ಗಳ ಅನುದಾನದಲ್ಲಿ 6 ಎಕರೆ 14 ಗುಂಟೆ ಜಾಗದಲ್ಲಿ, ಸುಸಜ್ಜಿತ ಹಾಗೂ ಎಲ್ಲ ಮೂಲ ಸೌಕರ್ಯಗಳೊಂದಿಗೆ ಹೊಸ ನಿಲ್ದಾಣ ಮೇಲೇಳುತ್ತಿದೆ. 2024ರ ಫೆಬ್ರವರಿ ವೇಳೆಗೆ ಸೇವಾರಂಭ ಮಾಡುವ ಇಂಗಿತವಿದೆ. ಇದು ಆರಂಭವಾದಲ್ಲಿ, ಸದ್ಯಕ್ಕೆ ತಾತ್ಕಾಲಿಕ ಬಸ್ ನಿಲ್ದಾಣವಾಗಿ ರೂಪಾಂತರವಾಗಿರುವ ಬಾಲಕರ ಸರ್ಕಾರಿ ಹೈಸ್ಕೂಲ್ ಮೈದಾನ ‘ಕ್ರೀಡೆ ಉದ್ದೇಶಕ್ಕೆ ಬಳಕೆಯಾಗದೆ ಹಾಳಾಗಿದೆ’ ಎಂಬ ಹಣೆಪಟ್ಟಿ ಕಳಚಲು ಸುಸಮಯವೂ ಒದಗಿಬರಲಿದೆ. ನಿಲ್ದಾಣದೊಟ್ಟಿಗೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಬಾಗಿಲೂ ತೆರೆದುಕೊಳ್ಳಲಿದೆ. ಪ್ರತಿ ಬಾರಿ ಮಳೆಗಾಲದಲ್ಲಿ ಕೆರೆಯ ಸ್ವರೂಪ ಪಡೆದು ಚರ್ಚೆಯ ವಸ್ತುವಾಗಿರುತ್ತಿದ್ದ ಈ ನಿಲ್ದಾಣದಲ್ಲಿ ಇದೀಗ ಮಳೆ ನೀರು ನಿಲ್ಲದಂತೆ ತಾಂತ್ರಿಕ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಮಾಡಿರುತ್ತಿದ್ದ ಬೈಕ್‌ಗಳಿಗೆ ಕೆಸರಿನಾಭಿಷೇಕ, ಬಿಸಿಲಿನ ಆತಂಕಕ್ಕೂ ಬೇಕ್ ಬಿದ್ದಿದೆ. 46 ಬಸ್ ನಿಲುಗಡೆಗೆ ಅವಕಾಶ ಬಸ್ ನಿಲ್ದಾಣದಲ್ಲಿ ಈ ಹಿಂದೆ ಒಮ್ಮೆಗೆ 23 ಬಸ್ ನಿಲ್ಲುತ್ತಿದ್ದ ಜಾಗದಲ್ಲಿ ಇದೀಗ 46ಕ್ಕೆ ಅವಕಾಶ ಕಲ್ಪಿಸಲು ನೆಲಮಹಡಿಯಲ್ಲಿ ಜಾಗ ವಿಸ್ತರಿಸಲಾಗಿದೆ. ಸುಮಾರು 20 ಪ್ಲಾಟ್‌ಫಾರಂ, ಜನರಿಗೆ ಕೂರಲು ಆಸನಗಳು, ನಿರ್ಮಿಸಲಾಗುತ್ತಿದೆ. ಇಂಜಿನಿಯರ್ ಒಬ್ಬರು ಹೇಳುವ ಪ್ರಕಾರ ಈ ನಿಲ್ದಾಣ ಒಂದರಿಂದಲೇ ಒಂದು ದಿನಕ್ಕೆ 2ಸಾವಿರ ಬಸ್‌ಗಳನ್ನು ಕಾರ್ಯಾಚರಣೆ ಮಾಡಬಹುದಾಗಿದೆ. ಮೂರಂತಸ್ತಿನ ಕಟ್ಟಡವುಳ್ಳ ಈ ನಿಲ್ದಾಣದಲ್ಲಿ ನೆಲಮಾಳಿಗೆಯಲ್ಲಿ 80 ಸಾವಿರ ಚದರಡಿ ವಿಸ್ತೀರ್ಣದ ವಿಶಾಲವಾದ ಬೈಕ್-ಕಾರುಗಳ ಪಾರ್ಕಿಂಗ್‌ಗೆ ಅವಕಾಶ ಮಾಡಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಇನ್ನಿತರೆ ವಾಣಿಜ್ಯ ಚಟುವಟಿಕೆಗಳಿಗೆ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಮಧ್ಯದಂತಸ್ತು ಸೇರಿ ವಿವಿಧೆಡೆ ಅಧಿಕಾರಿ- ಸಿಬ್ಬಂದಿಗೆ ಕಚೇರಿ ಕೊಠಡಿಗಳಿವೆ. ಮಹಿಳೆಯರು, ಅಂಗವಿಲಕರಿಗೆ ಪ್ರತ್ಯೇಕ ವಿಶ್ರಾಂತಿಗೃಹ, ಶೌಚಗೃಹ ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಂದೆಡೆ ಕ್ಯಾಂಟೀನ್ ಮಾಡಲಾಗುತ್ತಿದೆ. ಕಚೇರಿಗಳು ಮತ್ತು ಇತರೆಡೆ ತೆರಳಲು ಎಸ್ಕಲೇಟರ್‌ಗಳಲ್ಲದೆ ಲಿಫ್ಟ್‌ಗಳನ್ನು ಅಳವಡಿಸಲಾಗುತ್ತಿದೆ.ವಿದ್ಯುತ್ ವೆಚ್ಚ ಉಳಿತಾಯ ಮಾಡಲು ಸೋಲಾರ್ ಛಾವಣಿ ಅಳವಡಿಕೆಯಾಗಿದೆ. ಸಿಸಿ ಕ್ಯಾಮರಾಗಳ ಅಳವಡಿಕೆ ಆರ್‌ಕೆ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಸದ್ಯಕ್ಕೆ ಹೊರಾವರಣದ ಗಾಜು ಅಳವಡಿಕೆ, ಪೇಂಟಿಂಗ್ ಇನ್ನಿತರೆ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ನಿಲ್ದಾಣ ಸುತ್ತಮುತ್ತ ಭದ್ರತೆ ದೃಷ್ಟಿಯಿಂದ 70 ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಕೆಲಸ ಮುಂದಿನ ಹಂತದಲ್ಲಿ ನಡೆಯಬೇಕಿದೆ ಎನ್ನುತ್ತಾರೆ ಸಿಬ್ಬಂದಿ. ಮೂರು ಮಲ್ಟಿಫ್ಲೆಕ್ಸ್ 300 ಜನರಿಗೆ ಆಸನ ಸೌಕರ್ಯವುಳ್ಳ ಒಂದು ಹಾಗೂ 175 ಸೀಟಿನ ಸಾಮರ್ಥ್ಯ ಹೊಂದಿದ ಎರಡು ಪ್ರತ್ಯೇಕ ಮಲ್ಟಿಫ್ಲೆಕ್ಸ್ ಸಿನಿಮಾಮಂದಿರಗಳು ಈ ಕಟ್ಟಡದಲ್ಲಿವೆ. ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಮಲ್ಟಿಫ್ಲೆಕ್ಸ್ ರಾಜ್ಯದಲ್ಲೇ ಇದೇ ಮೊದಲು ಎನ್ನಲಾಗಿದೆ. ಇದರ ನಿರ್ವಹಣೆಗೆ ಮುಂಬರುವ ದಿನಗಳಲ್ಲಿ ಆನ್‌ಲೈನ್ ಟೆಂಡರ್ ನಡೆಸುವ ಇರಾದೆ ಇದೆ. ಮಲ್ಟಿಫ್ಲೆಕ್ಸ್ ಸೇರಿ ವಾಣಿಜ್ಯ ಚಟುವಟಿಕೆಗಳಿಂದ ನಿಗಮಕ್ಕೆ ತಿಂಗಳೊಂದಕ್ಕೆ ಸುಮಾರು 40 ರಿಂದ 50 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ---
ಜನವರಿ ಅಂತ್ಯಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ. ಹೊಸ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳಿರುವ ಕಾರಣಕ್ಕೆ ಸಹಜವಾಗಿ ಆದಾಯ ಹೆಚ್ಚುವ ನಿರೀಕ್ಷೆ ಇದೆ. ದಾವಣಗೆರೆ ಪಾಲಿಕೆ ಮತ್ತು ನಿಗಮದ ಜಂಟಿ ಸಭೆಯಲ್ಲಿ ವಾಣಿಜ್ಯ ಮಳಿಗೆಗಳ ಬಾಡಿಗೆ ನಿರ್ಧಾರ ಮಾಡಬೇಕಿದೆ. ಸಿ.ಇ.ಶ್ರೀನಿವಾಸಮೂರ್ತಿ ಕೆಎಸ್‌ಆರ್‌ಟಿಸಿ ವಿಭಾಗೀಯ ಡಿಸಿ