ಮೈಸೂರು: ಚಿಲ್ಲರೆ ಹಣ ನೀಡುವ ವಿಷಯವಾಗಿ ಜಗಳ ತೆಗೆದ ಪ್ರಯಾಣಿಕನೊಬ್ಬ ಕೆಎಸ್‌ಆರ್‌ಟಿಸಿ ಕಂಡಕ್ಟ್‌ರ್ ಮೇಲೆ ಹಲ್ಲೆ ಮಾಡಿದ್ದಾನೆ.
ಬಸ್ ನಿರ್ವಾಹಕ ಮಹೇಶ್ ಹಲ್ಲೆಗೆ ಒಳಗಾದವರು. ಬೆಂಗಳೂರು ಮೂಲದ ಬಿಕಾಸ್ ಕುಮಾರ್ ಎಂಬಾತ ಹಲ್ಲೆ ಮಾಡಿದ ಆರೋಪಿ.
ಮಂಡ್ಯದಿಂದ ಮೈಸೂರಿಗೆ ಬರುತ್ತಿದ್ದ ಬಸ್‌ನಲ್ಲಿ ಮಹೇಶ್ ಸೂಕ್ತ ಚಿಲ್ಲರೆ ಇಲ್ಲದ ಕಾರಣ ಬಿಕಾಸ್ ಹಾಗೂ ಇನ್ನೊಬ್ಬ ಸಹ ಪ್ರಯಾಣಿಕರಿಗೆ ಸೇರಿ 100 ರೂ. ನೀಡಿ ತಲಾ 50 ರೂ. ಹಂಚಿಕೊಳ್ಳುವಂತೆ ಹೇಳಿದ್ದಾರೆ.
ಇದನ್ನು ಒಪ್ಪದ ಬಿಕಾಸ್ ನೀವೇ ಚಿಲ್ಲರೆ ಹಣ ನೀಡಬೇಕೆಂದು ಎಂದು ಗಲಾಟೆ ಮಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ನಿರ್ವಾಹಕನ ಮೇಲೆ ಬಿಕಾಸ್ ಹಲ್ಲೆ ನಡೆಸಿದ್ದಾರೆ.
ಇದರಿಂದ ಅವರ ಕಿವಿಗೆ ಗಂಭೀರ ಪೆಟ್ಟು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.