ಹೊಳೆನರಸೀಪುರ : ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಮತ್ತು ಶಾಲಾ ಅವಧಿ ಮುಗಿದ ತಕ್ಷಣ ತಮ್ಮ ಮನೆಗಳಿಗೆ ವಾಪಸ್ಸು ಬೆಳಕಿರುವಾಗಲೇ ಸುರಕ್ಷಿತವಾಗಿ ತೆರಳಲು ಸಮಯಕ್ಕೆ ಸರಿಯಾಗಿ ಕೆ ಎಸ್ ಆರ್ ಟಿ ಸಿ ಬಸ್ ಸೌಲಭ್ಯವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಘಟಕದವರು ಪಟ್ಟಣದ ಕೆ ಎಸ್ ಆರ್ ಟಿ ಸಿ ಡಿಪೋ ಎದುರು ಪ್ರತಿಭಟನೆ ನಡೆಸಿದರು
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಮೆರವಣಿಗೆಯ ಮೂಲಕ ಜೈಕಾರ ಹಾಕುತ್ತಾ ಪಟ್ಟಣದ ಸಾರಿಗೆ ಸಂಸ್ಥೆಯ ಘಟಕದ ವರೆಗೆ ಪ್ರತಿಭಟನೆಯಲ್ಲಿ ತೆರಳಿ ಬಸ್ ಗಳ ಸೌಲಭ್ಯವನ್ನು ಹೆಚ್ಚಿಸಬೇಕೆಂದು ಪ್ರತಿಭಟನೆ ನಡೆಸಿ.ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸುಪ್ರೀತ್ ಸಾರಿಗೆ ಸಂಸ್ಥೆಯ ಬಸ್ ಗಳು ನಿಗದಿತ ಸಮಯಕ್ಕೆ ಬಾರದೆ ಸಮಸ್ಯೆಯನ್ನು ತಂದಿಟ್ಟಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿಗೆ ತಾಲೂಕು ಕೇಂದ್ರಕ್ಕೆ ಬರಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಓದಿಗಿಂತ ಹೆಚ್ಚಾಗಿ ಬಸ್ಸುಗಳಿಗೆ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅವ್ಯವಸ್ಥೆಯಿಂದ ನಾವೆಲ್ಲ ಪರಿತಪಿಸುವಂಥಾಗಿದೆ. ಎಂದು ಅಸಮಾಧಾನ ಹೊರ ಹಾಕಿದ್ರು, ಅತಿಯಾದ ಜನರಿಂದ ತುಂಬಿ ತುಳುಕುತ್ತಿರುವ ಎಲ್ಲ ಬಸ್ಸುಗಳಲ್ಲಿ ಚಾಲಕರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಬಸ್ಗಳಲ್ಲಿ ಹತ್ತಿಸಿಕೊಳ್ಳಲು ಉದಾಸೀನ ಮಾಡುತ್ತಿರುವ ಪರಿಣಾಮ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಕಾಲೇಜಿಗೆ ತೆರಳಲು ಮತ್ತು ಶಾಲೆಗೆ ಹೋಗಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಕೆಲವು ಸಂದರ್ಭದಲ್ಲಿ ಬಸ್ ನಿಲ್ಲಿಸದೆ ತೆರಳುತ್ತಾರೆ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಭಾಗವಹಿಸಲು ತೊಂದರೆಯಾಗುತ್ತಿದೆ. ಈ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಹರ ಸಾಹಸ ಪಡುವಂತಾಗಿದೆ. ಮತ್ತೆ ಕಾಲೇಜಿನಿಂದ ವಾಪಸ್ಸು ತಮ್ಮ ಗ್ರಾಮಗಳಿಗೆ ತೆರಳಲು ಬಸ್ ಸೌಲಭ್ಯವಿಲ್ಲದೆ ಬಳಲುವಂತಾಗಿದ್ದು ವಿದ್ಯಾರ್ಥಿನಿಯರನ್ನು ತಮ್ಮ ಪೋಷಕರು ಶಾಲೆ ಮತ್ತು ಕಾಲೇಜುಗಳಿಗೆ ಕಳುಹಿಸಲು ಹಿಂಜರಿಯುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಅವ್ಯವಸ್ಥೆಯನ್ನು ಸರಿಪಡಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ಹಸನಾಗಿ ರೂಪಿಸಿಕೊಳ್ಳಲು ಪೂರಕವಾಗಿ ಶಾಲಾ ಕಾಲೇಜುಗಳಿಗೆ ತೆರಳುವ ಮತ್ತು ತಮ್ಮ ಗ್ರಾಮಗಳಿಗೆ ವಾಪಸ್ ಆಗುವ ಸಂದರ್ಭದಲ್ಲಿ ಹೆಚ್ಚಿನ ಬಸ್ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಈ ಮೂಲಕ ಘಟಕ ವ್ಯವಸ್ಥಾಪಕರನ್ನು ಆಗ್ರಹಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ಪಾಪ ನಾಯಕ್ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುವ ಸಮಯ ಇದಾಗಿರುವುದರಿಂದ ಬಸ್ ಗಳನ್ನು ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಮತ್ತು ನಗರ ಮಾರ್ಗಕ್ಕೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಹೆಚ್ಚುವರಿಯಾಗಿ ಐದು ಬಸ್ ಗಳನ್ನು ಒದಗಿಸಿಕೊಡುವಂತೆ ನಮ್ಮ ಘಟಕದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿಗಳು ನಮ್ಮ ಘಟಕದ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಬಸ್ ಚಾಲಕರು ಮತ್ತು ನಿರ್ವಾಹಕರೊಂದಿಗೆ ಸಹಕರಿಸಬೇಕು. ಬಸ್ ಚಾಲಕರು ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಅನಾನುಕೂಲ ಆಗದಂತೆ ಗಮನಹರಿಸಬೇಕಿದೆ. ಈ ಕುರಿತು ಚಾಲಕರಿಗೆ ಖಡಕ್ಕಾಗಿ ಸೂಚನೆ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಎನ್ ಎಸ್ ಯು ಐ ಮುಖಂಡ ಮುರಳಿ ಹೆಚ್ ಎಸ್, ಚೇತನ ಯೋಗೇಶ ಪವನ್ ಜೀವನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು