ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರ. ಈ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಂಸ್ಥೆ ಶ್ರಮಿಸಿದ್ದು, ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದು ನರಗುಂದ ಪುರಸಭೆ ಮುಖ್ಯಾಧಿಕಾರಿ ಅಮಿತ ತಾರದಾಳೆ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 2021-22ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪಾರಿತೋಷಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಸಾಮಾಜಿಕ ಜಾಲತಾಣಗಳತ್ತ ವಾಲದೇ ವ್ಯವಸ್ಥಿತವಾಗಿ ಅಧ್ಯಯನ ಮಾಡಿದರೆ ಅಂದುಕೊಂಡ ಗುರಿ ಸಾಧಿಸಬಹುದು ಎಂದರು.
ಪಿಯುಸಿ ಹಂತ, ವಿದ್ಯಾರ್ಥಿ ಜೀವನದಲ್ಲಿ ಸಂಕಿರ್ಣ ಘಟ್ಟ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿ ದೆಸೆಯಲ್ಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಮಾತನಾಡಿ, ವೇಳೆಯ ಸದುಪಯೋಗ ಮಾಡಿಕೊಳ್ಳಬೇಕು. ತಾಳ್ಮೆಯಿಂದ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಬರುವ ಸಮಸ್ಯೆ ಎದುರಿಸಿ ಗುರಿ ತಲುಪಬೇಕು ಎಂದರು.
ಕೆಎಲ್‌ಇ ಸಂಸ್ಥೆ ಆಜೀವ ಸದಸ್ಯ ಎಸ್.ಜಿ.ನಂಜಪ್ಪನವರ, ಡಾ.ಸತೀಶ ಎಂ.ಪಿ.ಉಪಸ್ಥಿತರಿದ್ದರು. ರಾಜಾವಾಣಿ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕ್ರೀಡಾ ಚಟುವಟಿಕೆಗಳ ಪಾರಿತೋಷಕ ವಿತರಣೆಯನ್ನು ಡಾ.ಎಸ್.ಎ.ಮೋದಗಿ ನಡೆಸಿಕೊಟ್ಟರು. ಪ.ಪೂ. ಪ್ರಾಚಾರ್ಯ ವಿಶ್ವನಾಥ ಕಾಮಗೋಳ ಸ್ವಾಗತಿಸಿದರು. ಎಸ್.ಬಿ.ಮಡಿವಾಳರ ಪರಿಚಯಿಸಿದರು. ಶ್ರದ್ಧಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸೃಷ್ಟಿ ಹಾಗೂ ನಿಕಿತಾ ನಿರೂಪಿಸಿದರು. ವರ್ಷಾ ಭದ್ರಿ ವಂದಿಸಿದರು. ವಿಜಯಲಕ್ಷ್ಮೀ ಕರೋಶಿ ಹಾಗೂ ಸಂಗಮೇಶ ಕರಬಣ್ಣವರ ಮಹಾವಿದ್ಯಾಲಯದ ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದರು. ಪೂರ್ಣಿಮಾ ರವಿಲ್ಲಾ, ವಿರಾಜ ಚಿತ್ರಗಾರ, ಬನಸಿಧರ ಪಾಟೀಲ ಅನಿಸಿಕೆ ಹಂಚಿಕೊಂಡರು.