ಜಿಲ್ಲೆ

ಕೆಎಲ್​ಇ ಟೆಕ್ ವಿವಿ ಘಟಿಕೋತ್ಸವ ನ. 16ರಂದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವವನ್ನು ಸಮಾರಂಭ ನ. 16ರಂದು ಬೆಳಗ್ಗೆ 10.30ಕ್ಕೆ ಡಾ. ಪ್ರಭಾಕರ ಕೋರೆ ಸ್ಪೋರ್ಟ್ಸ್ ಅರೆನಾದಲ್ಲಿ ಆಯೋಜಿಸಲಾಗಿದೆ.

ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಏಕಸ್ ಸಂಸ್ಥೆಯ ಚೇರ್ಮನ್ ಅರವಿಂದ ಮೆಳ್ಳಿಗೇರಿ ಅವರಿಗೆ ಗೌರವ ಡಾಕ್ಟರೇಟ್ ಹಾಗೂ 1677 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು ಎಂದು ವಿವಿ ಕುಲಪತಿ ಪ್ರೊ. ಪ್ರಕಾಶ ತೇವರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಅಭಯ ಕರಂಡಿಕರ ಉದ್ಘಾಟಿಸುವರು. ಕೆಎಲ್​ಇ ಸಂಸ್ಥೆಯ ಚೇರ್ಮನ್ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು ಎಂದರು.

2014ರಲ್ಲಿ ಆರಂಭಗೊಂಡ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು 2019ರಲ್ಲಿ ನಡೆಸಲಾಗಿತ್ತು. ಈ ಬಾರಿ ಸ್ನಾತಕ ವಿಭಾಗದಲ್ಲಿ 1367 ವಿದ್ಯಾರ್ಥಿಗಳು, ಸ್ನಾತಕೋತ್ತರ ವಿಭಾಗದಲ್ಲಿ 293 ಹಾಗೂ 17 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ 18 ಪದವೀಧರರು ಚಿನ್ನದ ಪದಕ ಹಾಗೂ 19 ವಿದ್ಯಾರ್ಥಿಗಳು ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಸಿವಿಲ್ ವಿಭಾಗದ ಟಾಪರ್​ಗೆ ಎಸ್.ಎಸ್. ಭಾವಿಕಟ್ಟಿ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.