ಶಿವಮೊಗ್ಗ: ಕೆಎಫ್ಡಿ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕೆಎಫ್ಡಿ ಜನಜಾಗೃತಿ ಒಕ್ಕೂಟದಿಂದ ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
1957ರಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದರೂ ಸರ್ಕಾರ ಇದೂವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇಚ್ಛಾಶಕ್ತಿ ತೋರುತ್ತಿಲ್ಲ. ಪ್ರತಿವರ್ಷ ಕಾಯಿಲೆ ಉಲ್ಭಣವಾದ ನಂತರ ಕಾರ್ಯಪ್ರವೃತ್ತವಾಗುವ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ನೀಡುವ ಚುಚ್ಚುಮದ್ದು ರೋಗ ತಡೆಗಟ್ಟುವಲ್ಲಿ ವಿಫಲವಾಗುತ್ತದೆ ಎಂದು ದೂರಿದರು.
50 ವರ್ಷದ ಹಿಂದೆ ಸಂಶೋಧನೆಗೊಂಡ ಚುಚ್ಚುಮದ್ದನ್ನೇ ಇಂದೂ ನೀಡಲಾಗುತ್ತಿದೆ. ವೈರಾಣುವಿನಲ್ಲಿ ಆದ ಬೆಳವಣಿಗೆಗೆ ತಕ್ಕಂತೆ ರೋಗ ನಿರೋಧಕ ಚುಚ್ಚುಮದ್ದು ಸಂಶೋಧಿಸದೇ ಹಳೇ ಮಾದರಿ ಚುಚ್ಚುಮದ್ದುಗಳನ್ನು ನೀಡುತ್ತಿದ್ದು, ಜನರು ಮುಂಜಾಗ್ರತೆಯಾಗಿ ಚುಚ್ಚುಮದ್ದು ಪಡೆದರೂ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 25 ಮಂದಿ ಬಲಿ ತೆಗೆದುಕೊಂಡಿದ್ದ ಕೆಎಫ್ಡಿ ಸೋಂಕು ಈ ಬಾರಿಯೂ ಈಗಾಗಲೇ ಒಂದೇ ತಿಂಗಳಲ್ಲಿ 4 ಮಂದಿಯನ್ನು ಬಲಿ ಪಡೆದಿರುವುದು ದುರದೃಷ್ಟಕರ. ಕಳೆದ ಬೇಸಿಗೆಯಲ್ಲಿ 2018ರ ಡಿಸೆಂಬರ್ ವೇಳೆಗೆ ಆರಂಭವಾಗಿದ್ದ ಸಾವಿನ ಸರಣಿ ಈ ಬಾರಿ ಈಗಾಗಲೇ ಆರಂಭವಾಗಿದೆ. ಕಳೆದ ವರ್ಷ 18 ಮಂದಿ ಸಾವು ಕಂಡಿದ್ದ ಸಾಗರ ತಾಲೂಕಿನ ಭಟ್ಕಳ ಗಡಿಭಾಗದ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ಬಾರಿಯೂ ರೋಗ ಉಲ್ಭಣಿಸಿದೆ ಎಂದರು.
ಜಿಲ್ಲೆಯ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಅಗತ್ಯ ಚುಚ್ಚುಮದ್ದು ಸೇರಿ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಬೇಕು. ರೋಗದ ಕುರಿತು ಮಾಹಿತಿ ನೀಡಲು ಮಲೆನಾಡು ಭಾಗದಲ್ಲಿ ಸಹಾಯವಾಣಿ ವ್ಯವಸ್ಥೆ ಮಾಡಬೇಕು. ಸೋಂಕಿತ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಖಾತ್ರಿಪಡಿಸಲು ಜಿಲ್ಲಾಡಳಿತ ಈ ಬಾರಿಯೂ ಗ್ರಾಮ ವಾಸ್ತವ್ಯ ನಡೆಸಬೇಕೆಂದು ಆಗ್ರಹಿಸಿದರು.
10 ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ರೋಗದಿಂದ ಮೃತಪಟ್ಟವರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಬಾಕಿ ವೆಚ್ಚವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮುಂದೆ ಕೂಡ ಚಿಕಿತ್ಸಾ ವೆಚ್ಚವನ್ನು ಯಾವುದೇ ವಿಳಂಬವಿಲ್ಲದೆ ನೀಡಲು ಪೂರಕವಾಗಿ ಪ್ರತ್ಯೇಕನಿಧಿ ಮೀಸಲಿಡಬೇಕು. ಸಾಗರದಲ್ಲಿ ಕೆಎಫ್ಡಿ ವೈರಾಣು ಸಂಶೋಧನಾ ಕೇಂದ್ರ ಆರಂಭಿಸಲು ಶೀಘ್ರವಾಗಿ ಕೆಲಸ ಆರಂಭಿಸಬೇಕು ಎಂದು ಆಗ್ರಹಿಸಿ ಡಿಸಿ ಕೆ.ಬಿ.ಶಿವಕುಮಾರ್ಗೆ ಮನವಿ ಸಲ್ಲಿಸಿದರು.
ಹಕ್ಕೋತ್ತಾಯಗಳನ್ನು 15 ದಿನಗಳಲ್ಲಿ ಈಡೇರಿಸದಿದ್ದಲ್ಲಿ ವಿವಿಧ ಸಂಘಟನೆಗಳೊಂದಿಗೆ ಜಿಲ್ಲೆಯ ನಾಗರಿಕರನ್ನು ಸಂಘಟಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಒಕ್ಕೂಟದ ಮುಖಂಡರಾದ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಶಶಿ ಸಂಪಳ್ಳಿ, ರವಿ ಹರಿಗೆ, ಏಳುಕೋಟಿ, ಚಟ್ನಳ್ಳಿ ನಾಗರಾಜ್, ಅಕ್ಷತಾ, ಅರ್ಜುನ್, ಮಾಲತೇಶ್, ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.