ಜಿಲ್ಲೆ

ಕೆಎನ್‌ಎನ್‌ಎಲ್ ಅಧಿಕಾರಿಯ ಕಾರು ಜಪ್ತಿ

ಧಾರವಾಡ: ಕೇಂದ್ರ ಗೃಹಸಚಿವ ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಓಡಾಟಕ್ಕೆ ಬಳಸಲು ಕಾರು ನೀಡಲು ಒಪ್ಪದ ಆರೋಪದ ಮೇಲೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ (ಕೆಎನ್‌ಎನ್‌ಎಲ್) ಅಧಿಕಾರಿಯ ಇನ್ನೋವಾ ಕಾರನ್ನು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಶುಕ್ರವಾರ ಸಂಜೆ ಜಪ್ತಿ ಮಾಡಲಾಯಿತು.
ಇಲ್ಲಿನ ಶ್ರೀನಗರದಲ್ಲಿರುವ ಕೆಎನ್‌ಎನ್‌ಎಲ್‌ನ ಮುಖ್ಯ ಆಡಳಿತಾಧಿಕಾರಿ ಡಾ. ಔದ್ರಾಮ ಅವರ ಕೆಎ- 25 ಜಿ- 0044 ಸಂಖ್ಯೆಯ ಕಾರನ್ನು ಜ. 28ರಂದು ಒಂದು ದಿನದ ಮಟ್ಟಿಗೆ ಜಿಲ್ಲಾಡಳಿತದ ಸುಪರ್ದಿಗೆ ವಹಿಸಲು ಸೂಚಿಸಲಾಗಿತ್ತು. ಆದರೆ, ಡಾ. ಔದ್ರಾಮ ಅವರು ಕಾರು ನೀಡಲು ಒಪ್ಪಿರಲಿಲ್ಲ ಎನ್ನಲಾಗಿದೆ. ಸಂಜೆಯಾದಗೂ ಕಾರ್ ಕೀ ನೀಡಲು ಒಪ್ಪದಿರುವುದರಿಂದ ಆರ್‌ಟಿಒ ಅಧಿಕಾರಿಗಳೇ ಸ್ಥಳಕ್ಕೆ ಬರಬೇಕಾಯಿತು. ಬಳಿಕ ಕಾರ್ ಶೋರೂಂನ ತಾಂತ್ರಿಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯಿತು. ಅವರು ಕಾರ್‌ನ ಗ್ಲಾಸ್ ತೆರೆದು ಬಳಿಕ ಬಾಗಿಲನ್ನು ತೆಗೆಯುವಲ್ಲಿ ಯಶಸ್ವಿಯಾದರು. ಖಾಸಗಿ ಕ್ರೇನ್ ತರಿಸಿ ಕಾರನ್ನು ಜಪ್ತಿ ಮಾಡಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರಿಸಲಾಗಿದೆ.