ಬೆಳಗಾವಿ: ಕೆಎಟಿ ಬೆಳಗಾವಿ ಪೀಠ ಸ್ಥಾಪನೆಗೆ ಕೇವಲ ಒಂದು ಎಕರೆ ಜಾಗ ಮಂಜೂರಾಗಿದೆ. ಸುಸಜ್ಜಿತ ಪೀಠ ನಿರ್ಮಾಣಕ್ಕೆ ಸ್ಥಳದ ಅಭಾವವಾಗಲಿದೆ.ಹೀಗಾಗಿ ಇನ್ನೂ ಹೆಚ್ಚಿನ ಜಾಗ ಪಡೆಯಲು ನಿರ್ಧಾರ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಕೆಎಟಿ ಅಧ್ಯಕ್ಷ ಆರ್.ಬಿ.ಬೂದಿಹಾಳ ಸೂಚಿಸಿದರು. ರಾಜ್ಯ ಆಡಳಿತ ನ್ಯಾಯ ಮಂಡಳಿಯ ಬೆಳಗಾವಿ ಪೀಠದ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿರುವ ಹಿಂಡಲಗಾ ಗ್ರಾಮದ ಸಿಂಧಿ ಕಾಲನಿ ಸಮೀಪದ ಸ್ಥಳಕ್ಕೆ ಕೆಎಟಿ ಅಧ್ಯಕ್ಷ ಆರ್.ಬಿ.ಬೂದಿಹಾಳ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. 1 ಎಕರೆ ನೀಡಿರುವ ಹಿಸ್ಸಾದಲ್ಲಿಯೇ ಇನ್ನೂ 20 ಗುಂಟೆ ಖಾಲಿ ಸ್ಥಳವಿದ್ದು, ಈ ಸ್ಥಳವನ್ನು ಕೆಎಟಿಗೆ ಒದಗಿಸಿಕೊಡಲು ಸರ್ಕಾರದ ಅನುಮೋದನೆ ಪಡೆಯುವಂತೆ ತಹಸೀಲ್ದಾರ್‌ಗೆ ನಿರ್ದೇಶಿಸಿದರು. ಹಿರಿಯ ವಕೀಲರು ಹಾಗೂ ಬೆಳಗಾವಿ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳ ಜತೆ ಸಾಧ್ಯಾಸಾಧ್ಯತೆ ಚರ್ಚಿಸಿದರು.
ಆಯ್ಕೆ ಮಾಡಿರುವ ಸ್ಥಳವು ಶೇ.30 ಹಳ್ಳದಿಂದ ಕೂಡಿದ್ದು, ಶೇ.20 ಸಿಡಿಪಿ ಯೋಜನೆಯ ಪ್ರಕಾರ ರಸ್ತೆ ಒಳಗೊಂಡಿದೆ. ಹಾಗಾಗಿ ಒಂದು ಎಕರೆ ಪೈಕಿ ಶೇ.50 ಜಾಗ ಮಾತ್ರ ಸಿಗುವುದರಿಂದ ಸ್ಥಳದ ಅಭಾವವಾಗಲಿದೆ. ಹೀಗಾಗಿ ಇನ್ನೂ ಹೆಚ್ಚಿನ ಜಾಗ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ ಹಾಗೂ ಉಪಾಧ್ಯಕ್ಷ ಸಚಿನ ಶಿವಣ್ಣವರ ಅವರನ್ನೊಳಗೊಂಡ ತಂಡವು, ಸತತ ಹೋರಾಟದ ಫಲವಾಗಿ ಬೆಳಗಾವಿಗೆ ದಕ್ಕಿದ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಶಾಸ್ವತ ಕಟ್ಟಡ ನಿರ್ಮಾಣಕ್ಕೆ ಸ್ಥಳ ಮಂಜೂರಾಗಿದೆ.
ಆದಷ್ಟು, ಕಾಮಗಾರಿ ಆರಂಭಿಸಿ, ನಿಗದಿತ ಅವಧಿಯಲ್ಲಿ ನೂತನ ಕಟ್ಟಡದಲ್ಲಿ ಕೆಎಟಿ ಕಾರ್ಯಾರಂಭ ಮಾಡುವಂತೆ ಕ್ರಮ ವಹಿಸಬೇಕು ಎಂದು ಕೆಎಟಿ ಅಧ್ಯಕ್ಷ ಆರ್.ಬಿ. ಬೂದಿಹಾಳ ಅವರಿಗೆ ಮೌಖಿಕ ಮನವಿ ಮಾಡಿತು. ಕೆಎಟಿ ಸದಸ್ಯ ಟಿ.ನಾರಾಯಣ ಸ್ವಾಮಿ, ಲೇಖನಾಧಿಕಾರಿ ಎಸ್.ಕೆ.ಒಂಟಗೋಡಿ, ಕೆ.ಎಸ್.ನಾಗರತ್ನ, ತಹಸೀಲ್ದಾರ್ ಆರ್.ಕೆ.ಕುಲಕರ್ಣಿ, ವಕೀಲರಾದ ಸಂಪತ್ ನೇಮಗೌಡರ, ಸಂತೋಷ ಶಹಾಪುರ,
ಎಸ್.ಎನ್.ಗೌಡರ ಇತರರು ಇದ್ದರು.