ಬೆಂಗಳೂರು: ಮೋಟಾರು ವಾಹನ ಇನ್ಸ್ಪೆಕ್ಟರ್ (ಎಂವಿಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರೀಡೂ ಮಾಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೆಎಟಿ ಆದೇಶ ಪ್ರಶ್ನಿಸಿ ವಿ.ಆರ್.ಲೋಕೇಶ್ ಸೇರಿ 11 ಮಂದಿ ಸಂಭಾವ್ಯ ಆಯ್ಕೆ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಪೀಠ, ಈ ಮಧ್ಯಂತರ ಆದೇಶ ಮಾಡಿದೆ. ಖಾಲಿ ಇದ್ದ 150 ಎಂವಿಐ ಹುದ್ದೆ ಭರ್ತಿಗೆ 2016ರ ಫೆ. 4ರಂದು ಕೆಪಿಎಸ್ಸಿ ಅರ್ಜಿ ಆಹ್ವಾನಿಸಿತ್ತು. ಪರೀಕ್ಷೆಗಳ ಬಳಿಕ 2019ರ ಜು. 4ರಂದು ಸಂಭಾವ್ಯ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ವೇಳೆ, ಗೋಕುಲ್ ದಾಸ್ ಹಾಗೂ ವೀರಣ್ಣಗೌಡ ಪಾಟೀಲ್ ಎಂಬ ಅಭ್ಯರ್ಥಿಗಳ ಅರ್ಜಿಗಳನ್ನು ಕೆಪಿಎಸ್ಸಿ ತಿರಸ್ಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಅಭ್ಯರ್ಥಿಗಳಿಬ್ಬರೂ ಕೆಎಟಿ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ, ಕೆಪಿಎಸ್ಸಿ ಆದೇಶ ರದ್ದುಪಡಿಸಿ, ಗೋಕುಲ್ದಾಸ್ ಹಾಗೂ ಪಾಟೀಲ್ ಅವರನ್ನು ಮೆರಿಟ್ ಹಾಗೂ ಮಿಸಲಾತಿ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸಬೇಕು ಎಂದು ಆದೇಶಿಸಿತ್ತು. ಆ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿರುವ ಲೋಕೇಶ್ ಹಾಗೂ ಇತರ ಅಭ್ಯರ್ಥಿಗಳು, ಕೆಎಟಿ ಆದೇಶದಿಂದ ತಮ್ಮ ಆಯ್ಕೆ ಪ್ರಕ್ರಿಯೆಗೆ ತೊಂದರೆಯಾಗಲಿದೆ.
ಆದ್ದರಿಂದ, ಆ ಆದೇಶ ರದ್ದುಪಡಿಸಬೇಕು. ಎಂವಿಐ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್ಸಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.