ಹಾಸನ : ಮಳೆ ಇಲ್ಲದೆ ಸಂಪೂರ್ಣವಾಗಿ ಬೆಳೆಗಳೆಲ್ಲ ನಾಶವಾಗಿದೆ. ಅಲ್ಪ ಸ್ವಲ್ಪ ಇರುವ ಜೋಳವನ್ನು ಸರ್ಕಾರ ರೈತರಿಂದ ನೇರವಾಗಿ ಕೆಎಂಎಫ್ ಮೂಲಕ ಖರೀದಿಸುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನೀರಾವರಿ ಮತ್ತು ಪಂಪ್‌ಸೆಟ್ ಮೂಲಕ ಹಾಗೂ ಬಿದ್ದಂತಹ ಅಲ್ಪಸ್ವಲ್ಪ ಮಳೆಯಲ್ಲಿ ಜೋಳವನ್ನು ಬೆಳೆದಿದ್ದಾರೆ. ಅದನ್ನು ಮುಖ್ಯಮಂತ್ರಿಗಳು ತಕ್ಷಣವೇ ಕೆಎಂಎಫ್ ಮೂಲಕ ಹೆಚ್ಚುವರಿ ಹಣ ಕೊಟ್ಟು ಖರೀದಿ ಮಾಡಬೇಕು. ಇಲ್ಲವಾದರೆ ಮುಂದಿನ ಸೋಮವಾರ ಕೆಎಂಎಫ್ ಕಟ್ಟಡಕ್ಕೆ ಬೆಳೆದ ಜೋಳವನ್ನು ಸುರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು
ಕೆಎಂಎಫ್ ಅಧಿಕಾರಿಗಳು ಹಣವನ್ನು ಲೂಟಿ ಹೊಡೆಯುವ ಉದ್ದೇಶದಿಂದ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಮೂಲಕ ಖರೀದಿ ಮಾಡುತ್ತಿದ್ದಾರೆ. ಇದರ ಬದಲಾಗಿ ರೈತರಿಂದ ನೇರವಾಗಿ ಖರೀದಿ ಮಾಡಲು ಮುಖ್ಯಮಂತ್ರಿ ಆದೇಶ ನೀಡುವ ಮೂಲಕ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾವೇರಿ ವಿಚಾರದಲ್ಲಿ ಸರಿಯಾದ ಕ್ರಮ ಕೈಗೊಳ್ಳದೆ ಇದ್ದ ಅಲ್ಪಸ್ವಲ್ಪ ನೀರನ್ನು ತಮಿಳುನಾಡಿಗೆ ಬಿಟ್ಟು ಸಂಕಷ್ಟ ತಂದಿದ್ದಾರೆ. ನೀರಾವರಿ ಪ್ರದೇಶದಲ್ಲಿ ನಾಟಿ ಮಾಡಿರುವಂತಹ ಬೆಳೆಗಳು ಕೂಡ ನಾಶವಾಗುತ್ತಿವೆ. ಆದ್ದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಇದರ ಬಗ್ಗೆ ಸರ್ವೆ ನಡೆಸಿ ಸಂಪೂರ್ಣವಾಗಿ ಬೆಳೆ ಪರಿಹಾರವನ್ನು ನೀಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಆದ್ದರಿಂದ ಜಿಲ್ಲಾಡಳಿತ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸಂಪೂರ್ಣವಾಗಿ ಸಮೀಕ್ಷೆ ನಡೆಸಬೇಕು. ಎಷ್ಟು ಎಕರೆಯಲ್ಲಿ ಬೆಳೆ ನಾಶವಾಗಿದೆ ಎಂಬುದನ್ನ ಕೃಷಿ ಅಧಿಕಾರಿಗಳ ಮೂಲಕ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸಬೇಕು. ತಪ್ಪು ಮಾಡಿರುವುದು ಸರ್ಕಾರ. ಅದಕ್ಕೆ ಸಂಪೂರ್ಣ ಪರಿಹಾರವನ್ನು ಸರ್ಕಾರವೇ ನೀಡಬೇಕು ಎಂದು ಒತ್ತಾಯಿಸಿದರು.
ಸ್ವಲ್ಪ ದಿನದ ಮಟ್ಟಿಗೆ ಸರ್ಕಾರ ತಮ್ಮ ಗ್ಯಾರಂಟಿಗಳನ್ನ ನಿಲ್ಲಿಸಿ, ಮೊದಲು ರೈತರ ಸಂಕಷ್ಟದಲ್ಲಿ ನೆರವಾಗಲಿ. ಆ ನಂತರ ಬೇಕಾದರೆ ನಿಮ್ಮ ಗ್ಯಾರಂಟಿಗಳನ್ನು ಮುಂದುವರೆಸಿ ಎಂದು ಸಲಹೆ ನೀಡಿದರು.