ಜಿಲ್ಲೆ

ಕೆಆರ್​ಪುರಂನಿಂದ ನಂಗಲಿವರೆಗೆ 6 ಪಥ ರಸ್ತೆ : ಸಂಸದ ಮುನಿಸ್ವಾಮಿ ಹೇಳಿಕೆ, ಕೇಂದ್ರದಿಂದ ಮಂಜೂರಾತಿ

ಕೋಲಾರ: ಆಂಧ್ರ, ತೆಲಂಗಾಣ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾ. ಹೆದ್ದಾರಿ 75ರಲ್ಲಿ ಕೆ.ಆರ್​.ಪುರಂನಿಂದ ರಾಜ್ಯದ ಗಡಿ ನಂಗಲಿವರೆಗೆ ಷಟ್ಪಥ ರಸ್ತೆ ನಿಮಾರ್ಣಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್​ ಗಡ್ಕರಿ ಮಂಜೂರಾತಿ ನೀಡಿದ್ದಾರೆ ಎಂದು ಸಂಸದ ಎಸ್​.ಮುನಿಸ್ವಾಮಿ ತಿಳಿಸಿದರು. ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲ್ಯಾಣ್​ ಗ್ರೂಪ್​, ಲ್ಯಾಂಕೋ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ರಾ. ಹೆದ್ದಾರಿ- 75 ಪ್ರಸ್ತುತ 4 ಪಥದ ರಸ್ತೆಯಾಗಿದೆ. ಆದರೆ ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವಾಹನಗಳ ಒತ್ತಡ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಗಡ್ಕರಿ ಅವರಿಗೆ ಮನವಿ ಮಾಡಿದ್ದು, ಒಪ್ಪಿಗೆ ನೀಡಿದ್ದಾರೆ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರ ಜೀವ ಉಳಿಸುವ ದೃಷ್ಟಿಯಿಂದ 40 ಕಿ.ಮೀಗೆ ಒಂದು ಆಂಬುಲೆನ್ಸ್​ ಸೇವೆ ನೀಡಿದ್ದು, ಅದನ್ನು 20 ಕಿ.ಮೀಗೆ ಒಂದರಂತೆ ಮಾಡಿಕೊಡಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆ ನೀಡಿದರು. ಹೆದ್ದಾರಿ ಉದ್ದಕ್ಕೂ ಸಿಸಿ ಕ್ಯಾಮೆರಾ ಅಳವಡಿಕೆ, ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ರಸ್ತೆ ಸುರಕ್ಷತಾ ಫಲಕಗಳ ಅಳವಡಿಕೆ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಅಮೃತ ಸರೋವರ ಯೋಜನೆಯಡಿ ಹೆದ್ದಾರಿ ಪ್ರಾಧಿಕಾರಕ್ಕೆ ಕೆರೆಗಳ ಪುನಶ್ಚೇತನದ ಹೊಣೆ ನೀಡಿದ್ದು, ಸಿಎಸ್​ಆರ್​ ನಿಧಿಯನ್ನು 2,800 ಕೆರೆಗಳಿರುವ ಜಿಲ್ಲೆಯಲ್ಲಿ ಬಳಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾ. ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ.ವಾಥೋರ್​ ಮಾತನಾಡಿ, ಮಕ್ಕಳು ರಸ್ತೆ ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಬೇಕು. ಹೆತ್ತವರಿಗೂ ಅರಿವು ಮೂಡಿಸಿ, ಶಾಲೆಗೆ ಸಂಪರ್ಕ ಕಲ್ಪಿಸುವ ಅಂಡರ್​ ಪಾಸ್​ ದುರಸ್ತಿಗೆ ಅಗತ್ಯ ಕ್ರಮದ ಭರವಸೆ ನೀಡಿದರು. ಅರಾಭಿಕೊತ್ತನೂರು ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್​.ಪ್ರದಿಪ್​ ಕುಮಾರ್​, ಹೆದ್ದಾರಿ ಪ್ರಾಧಿಕಾರದಿಂದ ಶಾಲೆಗೆ ಮತ್ತಷ್ಟು ಕೊಡುಗೆ ಅಗತ್ಯವಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೀಡಬೇಕಾಗಿದ್ದ ಪರಿಹಾರದ ಕಡತವೂ ಬಾಕಿ ಇದ್ದು, ಶೀಘ್ರ ಪರಿಹಾರ ವಿತರಿಸಲು ಕೋರಿದರು. ನರಸಾಪುರದಿಂದ ನಂಗಲಿವರೆಗೆ ಸಂಸದ ಮುನಿಸ್ವಾಮಿ ಹೆದ್ದಾರಿಯನ್ನು ಪರಿಶೀಲನೆ ನಡೆಸಿದರು. ಜಿ.ಆರ್​.ಎಸ್​ ಮುಳಬಾಗಿಲು ಟೂಲ್​ವೇಸ್​ ಪೆ.ಲಿ ನಲ್ಲಿ ಗಿಡಗಳನ್ನು ನೆಡಲಾಯಿತು. ಮುಳಬಾಗಿಲು ತಹಸೀಲ್ದಾರ್​ ಶೋಭಿತಾ ಇದ್ದರು. ಕೋಲಾರ ತಹಸೀಲ್ದಾರ್​ ನಾಗರಾಜ್​, ನಗರಸಭೆ ಸದಸ್ಯ ಮುರಳಿಗೌಡ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕರ್ನಲ್​ ಎ.ಕೆ.ಜಾನ್​ಬಾಜ್​, ಸಂದೀಪ್​ ಕುಮಾರ್​, ಕಲ್ಯಾಣ್​ ಗ್ರೂಪ್​ ಸತೀಶ್​ ಎಂಗ್ಲೆ, ರಾಜೇಂದ್ರ ನವರತ್ನಭ್​, ಮಲ್ಲಿಕಾರ್ಜುನ್​, ಎಎಸ್​ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಸದಸ್ಯರಾದ ರಾಮಚಂದ್ರಪ್ಪ, ಮಮತಾ, ಶಿಕ್ಷಕರಾದ ಸಿದ್ದೇಶ್ವರಿ, ಗೋಪಾಲಕೃಷ್ಣ, ಶ್ವೇತಾ, ಸುಗುಣಾ, ವೆಂಕಟರೆಡ್ಡಿ, ಶ್ರೀನಿವಾಸಲು, ಫರೀದಾ ಮತ್ತಿತರರು ಹಾಜರಿದ್ದರು.

ವಿಶ್ವದಲ್ಲೇ ತನ್ನ ಪ್ರಜೆಗಳಿಗೆ 2 ಡೋಸ್​ ಉಚಿತ ವ್ಯಾಕ್ಸಿನ್​ ನೀಡಿದ ಸಾಧನೆ ಕೇಂದ್ರ ಸರ್ಕಾರದ್ದಾಗಿದೆ. ಮೋದಿ ಅವರು ಪ್ರಧಾನಿಯಾದ ನಂತರ ಸೈನಿಕರಿಗೆ ಗುಣಮಟ್ಟದ ಶಸ್ತ್ರಾಸ್ತ್ರ ಒದಗಿಸಿದ್ದಾರೆ. ಬುಲೆಟ್​ ಪ್ರೂಫ್​ ಜಾಕೇಟ್​ ನೀಡಿದ್ದಾರೆ. ಶಾಲೆ, ಮನೆ, ರಸ್ತೆ ಬದಿ ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಅದು ಆಮ್ಲಜನಕದ ಕೊರತೆ ನೀಗಿಸುತ್ತದೆ. ಮಕ್ಕಳು ತಂದೆ-&ತಾಯಿ, ಗುರುಗಳಿಗೆ ಗೌರವ ನೀಡುವುದನ್ನು ಕಲಿಯಬೇಕು. ಶಿಸ್ತು ಅತಿ ಮುಖ್ಯ, ಹಿರಿಯರ ಆಶಯ ಈಡೇರಿಸಿ, ಇತಿಹಾಸ ನಿರ್ಮಿಸುವ ಒಳ್ಳೆಯ ಸಾಧಕರಾಗಬೇಕು. ಎಸ್​.ಮುನಿಸ್ವಾಮಿ, ಸಂಸದ