ಕೆ.ಆರ್.ಸಾಗರ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದಲ್ಲಿ ಭಾನುವಾರ ಸಂಜೆ ಐವರು ಪ್ರವಾಸಿಗರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ವೈದ್ಯಾಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ನಾಯಿಗಳ ಚಲನವಲನಗಳನ್ನು ಪರಿಶೀಲಿಸಿತು.
ತಾಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಆರೋಗ್ಯ ಸಹಾಯಕ ಶಿವಸ್ವಾಮಿ, ತಾಲೂಕು ಹಿರಿಯ ಆರೋಗ್ಯ ಸಹಾಯಕ ಡಾ.ಮೋಹನ ಸೇರಿದಂತೆ ಇತರರು ಬೃಂದಾವನದ ಉತ್ತರ ಮತ್ತು ದಕ್ಷಿಣ ಬೃಂದಾವನದಲ್ಲಿ ಹುಚ್ಚು ನಾಯಿ ಚಲನವಲನ ಮತ್ತು ಇತರ ನಾಯಿಗಳ ಬಗ್ಗೆ ಪರಿಶೀಲಿಸಿತು. ಸ್ಥಳೀಯ ಹಾಗೂ ಕೆ.ಆರ್.ಸಾಗರ ಗ್ರಾಪಂ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಜಿಲ್ಲಾ ಆರೋಗ್ಯ ಸಹಾಯಕ ಶಿವಸ್ವಾಮಿ ಮಾತನಾಡಿ, ಪ್ರವಾಸಿಗರಿಗೆ ಹುಚ್ಚು ನಾಯಿ ಕಚ್ಚಿದ ಸ್ಥಳ ಸೇರಿದಂತೆ ಬೃಂದಾವನದ ಎರಡು ಭಾಗಗಳಲ್ಲಿ ಪರಿಶೀಲಿಸಿದೆವು. ಇಲ್ಲಿ ಸಾಮಾನ್ಯ ನಾಯಿಗಳಿದ್ದು, ಯಾವುದೇ ಹುಚ್ಚು ನಾಯಿ ಕಂಡು ಬಂದಿಲ್ಲ. ಬಹುಶಃ ಸಮೀಪದ ಹಳ್ಳಿಗಳಿಂದ ಬಂದಿರಬಹುದು. ಇಲ್ಲಿ ತಾಜ್ಯದ ರಾಶಿ ಸೃಷ್ಟಿಯಾಗಿದ್ದು, ನಾಯಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು, ಕಾ.ನೀ.ನಿಗಮದ ಆಧಿಕಾರಿಗಳ ಜತೆ ಚರ್ಚಿಸಲಾಗಿದೆ. ಇಲ್ಲಿ ಕಂಡು ಬಂದಿರುವ ವಾಸ್ತವ ಸ್ಥಿತಿಗತಿಗಳ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಅವರ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಸಹಾಯಕ ಅಭಿಯಂತರ ವೇಣುಗೋಪಾಲ ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಉತ್ತರ ಬೃಂದಾವನ ಸೇರಿದಂತೆ ಬೃಂದಾವನ ವಿವಿಧಡೆಯ ಹಲವು ಸ್ಥಳಗಳಲ್ಲಿ ಹುಡಕಾಟ ನಡೆಸಿದರೂ ಹುಚ್ಚುನಾಯಿ ಕಂಡು ಬಂದಿಲ್ಲ. ಕೆ.ಆರ್.ಸಾಗರ ಪ್ರಾಥಮಿಕ ಕೇಂದ್ರದ ಆರೋಗ್ಯ ನಿರೀಕ್ಷಕಿ ರಮ್ಯಾ, ಹಿರಿಯ ಅರೋಗ್ಯ ಸಹಾಯಕಿ ಸೌಮ್ಯಾ ಮಂಜು ಇತರರು ಇದ್ದರು.
ಬೃಂದಾವನದಲ್ಲಿ ಕೆಲ ದಿನಗಳ ಹಿಂದಷ್ಟೇ ಹಲವು ನಾಯಿಗಳನ್ನು ಹಿಡಿಸಿ ಸಮೀಪದ ಅರಣ್ಯವಲಯಕ್ಕೆ ಬಿಡಲಾಗಿತ್ತು. ಬೃಂದಾವನದಲ್ಲಿ ಪ್ರವಾಸಿಗರ ಮೇಲೆ ಹುಚ್ಚು ನಾಯಿ ದಾಳಿ ಪ್ರಕರಣ ಇದೇ ಮೊದಲು. ಮಂಗಳವಾರ ಅಥವಾ ಬುಧವಾರ ಬೃಂದಾವನದಲ್ಲಿರುವ ಎಲ್ಲ ನಾಯಿಗಳನ್ನು ಕಾನೂನಿನ ಚೌಕಟ್ಟಿನಡಿ ಹಿಡಿಸಿ ಮಾರ್ಗಸೂಚಿಯಂತೆ ಅರಣ್ಯವಲಯದಲ್ಲಿ ಬಿಡಲಾಗುವುದು.
> ಫಾರೂಕು ಅಬು, ಸಹಾಯಕ ಕಾರ್ಯಪಾಲಕ ಅಭಿಯಂತರ ಕಾ.ನೀ.ನಿಗಮ ಕೆ.ಆರ್.ಸಾಗರ.