ಜಿಲ್ಲೆ

ಕೆಆರ್‌ಎಸ್ ಅಚ್ಚಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು

ಲಲಾಟಾಕ್ಷ ಎಸ್

ಪಾಂಡವಪುರ: ಕೆಆರ್‌ಎಸ್ ಅಚ್ಚಕಟ್ಟು ವ್ಯಾಪ್ತಿಯ ನಾಲಾ ಬಯಲಿನಲ್ಲಿ ನೀರಿಲ್ಲದೆ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಬುಧವಾರದಿಂದ ನಾಲೆಗಳಿಗೆ ನೀರು ಹರಿಸಲಾಗಿದೆ.


ತಕ್ಷಣದಿಂದಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದ್ದರು. ನೀರು ಹರಿಸದಿದ್ದರೆ ನಿಗಮದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತಸಂಘ ಮುಖಂಡರು ಎಚ್ಚರಿಕೆ ನೀಡಿದ ಪರಿಣಾಮವಾಗಿ ನಾಲೆಗಳಿಗೆ ನೀರು ಹರಿಸಲಾಗಿದೆ.


ಮುಂಗಾರು ಮಳೆ ಕೈಕೊಟ್ಟಿರುವ ಜತೆಗೆ ನಾಲೆಗಳಲ್ಲಿ ನೀರು ಹರಿಯದ ಪರಿಣಾಮ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ ಎಕರೆ ಕಬ್ಬು ಹಾಗೂ 40 ಸಾವಿರ ಎಕರೆ ಭತ್ತ ಒಣಗುವ ಹಂತ ತಲುಪಿದ್ದು, ತಕ್ಷಣದಿಂದಲೇ ನಾಲೆಗಳಿಗೆ ನೀರು ಹರಿಸಿ ರೈತರ ಹಿತ ಕಾಪಾಡಬೇಕು. ಇಲ್ಲವಾದರೆ, ನೀರಿಲ್ಲದೆ ಬೆಳೆಗಳು ಸಂಪೂರ್ಣ ಒಣಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಎದುರಿಸಬೇಕಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಅಧಿಕಾರಿಗಳು ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳದಿದ್ದರೆ ಕೆಆರ್‌ಎಸ್‌ನಲ್ಲಿರುವ ನೀರಾವರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಮತ್ತೊಂದೆಡೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸಲಾಗಿದೆ.


ಕಟ್ಟು ಪದ್ಧತಿಯಡಿ ಹದಿನೈದು ದಿನಗಳಿಗೊಮ್ಮೆ ನಾಲೆಗಳಿಗೆ ನೀರು ಹರಿಸಬೇಕಿತ್ತು. ಆದರೆ, ಅಣೆಕಟ್ಟೆಯಲ್ಲಿನ ನೀರಿನ ಸಂಗ್ರಹ 82 ಅಡಿಗೆ ಇಳಿದಿದ್ದು, ಮಾನ್ಸೂನ್ ಪ್ರಾರಂಭವಾದರೆ ನಾಲೆಗಳಿಗೆ ನೀರು ಹರಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂಬ ಉದ್ದೇಶದಿಂದ ಅಧಿಕಾರಿಗಳು ನೀರು ಹರಿಸುವ ಬಗ್ಗೆ ಅನಿಶ್ಚಿತತೆಯಲ್ಲಿದ್ದರು. ಮಾನ್ಸೂನ್ ಆಗಮನ ತಡವಾಗಿಯಾದರೂ ಆರಂಭವಾಗದ ಹಿನ್ನೆಲೆಯಲ್ಲಿ ಬೆಳೆಗಳು ಒಣಗಲು ಪ್ರಾರಂಭವಾದ್ದರಿಂದ ರೈತಸಂಘ ಮುಖಂಡರು ನಾಲೆಗೆ ನೀರು ಹರಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವಲ್ಲಿ ಸಫಲರಾಗಿದ್ದಾರೆ.