ಜಿಲ್ಲೆ

ಕೆಆರ್ ಎಸ್ ಹಿನ್ನೀರಿನಲ್ಲಿ ಮುಳುಗಿದ್ದ ಮತ್ತಿಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ

ಆರ್.ಕೃಷ್ಣ

ಮೈಸೂರು: ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿದ್ದ ಮತ್ತಿಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು, ಮೂರು ವಿದ್ಯಾರ್ಥಿಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ನಗರದ ಜಯಲಕ್ಷ್ಮೀಪುರಂನ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಪಡುವಾರಹಳ್ಳಿಯ ಭರತ್ (20), ರಾಮಕೃಷ್ಣನಗರದ ಪ್ರವೀಣ್ ಮೊಯಿಲ್ (20), ಹೆಬ್ಬಾಳಿನ ವರುಣ್ (21) ಮೃತಪಟ್ಟವರು.
ಮೂರು ದಿನಗಳ ಹಿಂದೆ ಭರತ್ ಜನ್ಮ ದಿನ ಇದ್ದುದ್ದರಿಂದ ಅದರ ಸಂಭ್ರಮಕ್ಕಾಗಿ ಕಾಲೇಜಿನ ಒಟ್ಟು ಐವರು ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನ ಕೆಆರ್‌ಎಸ್ ಜಲಾಶಯದ ಹಿನ್ನೀರಿಗೆ ತೆರಳಿದ್ದರು. ಈಜಾಟದಲ್ಲಿ ತೊಡಗಿದ್ದಾಗ ಭರತ್, ಪ್ರವೀಣ್ ಹಾಗೂ ವರಣ್ ನೀರಿನಲ್ಲಿ ಮುಳುಗಿದ್ದು, ಮತ್ತಿಬ್ಬರು ವಿದ್ಯಾರ್ಥಿಗಳು ಪಾರಾಗಿದ್ದರು.
ಭರತ್ ಮೃತದೇಹ ಶನಿವಾರ ಸಂಜೆಯೇ ಪತ್ತೆಯಾಗಿತ್ತು. ಇನ್ನಿಬ್ಬರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿತ್ತು. ಭಾನುವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿ ಉಳಿದಿಬ್ಬರ ಮೃತದೇಹ ಹೊರ ತೆಗೆದರು.
ಕುಟುಂಬದವರು, ಸ್ನೇಹಿತರ ಆಕ್ರಂದನದ ನಡುವೆ ಕೆ.ಆರ್. ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.