ಜಿಲ್ಲೆ

ಕೆಂಪೇಗೌಡರು ದೂರದೃಷ್ಟಿ ಆಡಳಿತ ವ್ಯವಸ್ಥೆಗೆ ಮಾದರಿ

ಚಿತ್ರದುರ್ಗ: ಕೆಂಪೇಗೌಡರು ನಾಡಪ್ರಭು ಮಾತ್ರವಲ್ಲ. ಸಮರ್ಥ ಆಡಳಿತಗಾರ, ಧರ್ಮಪ್ರಭುವೂ ಆಗಿದ್ದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕೆಂಪೇಗೌಡರು ದೂರದೃಷ್ಠಿಯ ನಾಯಕ. ಬೆಂಗಳೂರು ಜಾಗತಿಕ ನಗರವಾಗುವಲ್ಲಿ ಮೂಲ ಕಾರಣಕರ್ತರಾಗಿದ್ದಾರೆ. ಸರ್ವ ಧರ್ಮೀಯರಿಗೆ, ಎಲ್ಲ ಭಾಷಿಕರಿಗೆ ಸುರಕ್ಷಿತ ಸ್ಥಳ. ಅಲ್ಲದೆ, ಶೈಕ್ಷಣಿಕ, ಔದ್ಯೋಗಿಕ, ಆರೋಗ್ಯ ಸೇರಿ ಎಲ್ಲ ವಲಯಗಳಲ್ಲೂ ತನ್ನದೇಯಾದ ಛಾಪು ಮೂಡಿಸಿದ್ದು, ಜಗತ್ತಿಗೆ ಸಿಲಿಕಾನ್ ಸಿಟಿಯಾಗಿದೆ. ಹೀಗಾಗಿ ಆಡಳಿತ ವ್ಯವಸ್ಥೆಗೂ ಮಾದರಿಯಾದವರು ಎಂದು ಬಣ್ಣಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಬೆಂಗಳೂರಿನ ಹಲವೆಡೆ ಕೆಂಪೇಗೌಡರು ವೃತ್ತಿಯ ಹೆಸರಿನಲ್ಲಿ ವಿವಿಧ ಪೇಟೆಗಳನ್ನು ನಿರ್ಮಿಸಿದ್ದರು. ಅವುಗಳೀಗ ಇಂಡಸ್ಟ್ರಿಯಲ್ ಏರಿಯಾಗಳಾಗಿವೆ. ಸಿಲಿಕಾನ್ ಸಿಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಮಹಾ ಪುರುಷರ ತತ್ವಾದರ್ಶ ನಮಗೆ ದಾರಿದೀಪವಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಅವರು ಮಾತನಾಡಿ, ರಾಜ್ಯದಲ್ಲಿ ಕೆಂಪೇಗೌಡರ ಹೆಸರಿನಲ್ಲಿ 53 ಜನರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಕೆಂಪೇಗೌಡರು ರಾಜಕೀಯ ಮುತ್ಸದ್ದಿ, ಆರ್ಥಿಕ ಚಿಂತಕರೂ ಹೌದು. 16ನೇ ಶತಮಾನದಲ್ಲೇ ನಗರ ವಿಸ್ತರಿಸುವ ಅತ್ಯುನ್ನತ ಮಾದರಿಯೊಂದಿಗೆ ಯೋಜನಾ ಶೈಲಿ ರೂಪಿಸಿದ್ದರಿಂದ ಬೆಂಗಳೂರು ಹಂತ-ಹಂತವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.

ಕೆರೆ, ಕೋಟೆ, ಗುಡಿ ಗೋಪುರಗಳ ನಿರ್ಮಾಣದ ಜತೆಗೆ ಕೃಷಿಗಾಗಿ ನೀರಾವರಿ, ನಗರ ವಾಣಿಜ್ಯೀಕರಣ, ರಕ್ಷಣೆ, ಉತ್ತಮ ಆಡಳಿತ ವ್ಯವಸ್ಥೆ ಸೇರಿ ಜನಹಿತ ಕಾರ್ಯಗಳ ಮೂಲಕ ಲೋಕ ಪ್ರಸಿದ್ಧಿಯಾದ ಮಾನವತಾವಾದಿ ಎಂದು ಬಣ್ಣಿಸಿದರು.

ಕೆಂಪೇಗೌಡರ ಆತ್ಮಸ್ಥೈರ್ಯ, ಪರಿಶ್ರಮ, ಬದ್ಧತೆ, ನೈತಿಕತೆ, ಸ್ವಾಭಿಮಾನ, ಅನುಪಮ ವ್ಯಕ್ತಿತ್ವ, ನಾಯಕತ್ವ ಗುಣ ಸೇರಿ ಒಳನೋಟಗಳು ಈಗಿನ ಜನಪ್ರತಿನಿಧಿಗಳಿಗೆ ಮತ್ತು ಆಡಳಿತಗಾರರಿಗೆ ಪ್ರೇರಕ ಶಕ್ತಿ ಮಾತ್ರವಲ್ಲ. ಮಾದರಿಯಾಗಿದೆ ಎಂದರು.

ವಿಜೇತರಿಗೆ ಬಹುಮಾನ: ಜಯಂತಿ ಅಂಗವಾಗಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರಶಸ್ತಿ ಪತ್ರ, ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು.

ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ, ಗೌರವಾಧ್ಯಕ್ಷ ಪ್ರೊ.ಎನ್.ಈರಣ್ಣ, ಮುಖಂಡರಾದ ಕರಿಯಪ್ಪ, ರಮೇಶಗೌಡ, ಹನುಮಂತಪ್ಪ, ಡಿಡಿಪಿಐ ಎಂ.ಆರ್.ಮಂಜುನಾಥ, ಬಿಇಒ ಎಸ್.ನಾಗಭೂಷಣ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್, ಬೋಸೆದೇವರಹಟ್ಟಿ ಮಂಜಣ್ಣ, ಡಾ. ನವೀನ್ ಮಸ್ಕಲ್ ಇತರರಿದ್ದರು.