ಚಿಕ್ಕಬಳ್ಳಾಪುರ: ನಾಡುಪ್ರಭು ಕೆಂಪೇಗೌಡರ ಆದರ್ಶ ತತ್ವಗಳನ್ನು ಪಾಲಿಸುವವರೇ ಮಹನೀಯ ವ್ಯಕ್ತಿಯ ನಿಜವಾದ ವಾರುಸುದಾರರಾಗಿರುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅಭಿಪ್ರಾಯಪಟ್ಟರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಮಹಾನಗರ ಹಾಗೂ ಏಷ್ಯಾ ಖಂಡದಲ್ಲಿಯೇ ಮೊದಲ ಮಹಾನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲು ಕೆಂಪೇಗೌಡರ ದೂರದೃಷ್ಟಿಯ ಯೋಜನೆಗಳೇ ಮುಖ್ಯ ಕಾರಣ ಎಂದರು.
ಮಹನೀಯರ ತತ್ವಾದರ್ಶಗಳು ಹಾಗೂ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು 500 ವರ್ಷಗಳ ಹಿಂದೆಯೇ ಕೆಂಪೇಗೌಡರು ಪ್ರತಿಪಾದಿಸಿದ್ದರು. ಸ್ವಜನಾಂಗಕ್ಕೆ, ನೆರವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸದೇ ಸರ್ವರ ಹಿತ ಕಾಪಾಡಿದರು ಎಂದು ತಿಳಿಸಿದರು.
ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಮಾತನಾಡಿ, 500 ವರ್ಷಗಳ ಹಿಂದೆಯೇ 347 ಬೃಹತ್ ಕೆರೆಗಳು 1,200ಕ್ಕೂ ಹೆಚ್ಚು ಸಣ್ಣ ಕೆರೆ-ಕಟ್ಟೆಗಳ ನಿರ್ಮಾಣ, ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಸಮುದಾಯಗಳಿಗೆ ಅನುಕೂಲಕರ 54 ಪೇಟೆಗಳ ಗುರುತಿಸುವಿಕೆ, ಅನೇಕ ದೇವಾಲಯಗಳು, ಅಗ್ರಹಾರಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಕಾರ್ಯ ಸೇರಿ ಕೆಂಪೇಗೌಡರ ಸರ್ವತೋಮುಖ ಅಭಿವೃದ್ಧಿಯ ಪರಿಕಲ್ಪನೆಯ ಕೊಡುಗೆ ಮಹತ್ತರವಾದುದು ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಡಿಸಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪಿ.ಶಿವಶಂಕರ್, ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಎಸಿ ಸಂತೋಷ್ ಕುಮಾರ್, ಮುಖಂಡರಾದ ಡಾ ಕೆ.ಪಿ.ನರಸಿಂಹಮೂರ್ತಿ, ಚದಲಪುರ ಎನ್.ನಾರಾಯಣಸ್ವಾಮಿ, ಎಂ.ಪ್ರಕಾಶ್, ಮರಳುಕುಂಟೆ ಕೃಷ್ಣಮೂರ್ತಿ, ಮಂಜುನಾಥ್ ಮತ್ತಿತರರು ಇದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ: ಬೆಂಗಳೂರು ಮೇಲಿನ ಅತಿಯಾದ ಆವಲಂಬನೆ, ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ರಾಜಧಾನಿ ಸುತ್ತಲಿನ ನಗರಗಳನ್ನು ಸ್ಯಾಟ್‌ಲೈಟ್ ಸಿಟಿಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಚಿಕ್ಕಬಳ್ಳಾಪುರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಮಾದರಿ ನಗರವನ್ನಾಗಿ ನಿರ್ಮಿಸುವ ಕನಸನ್ನು ಸಾಕಾರಗೊಳಿಸಲು ಶ್ರಮಿಸಲಾಗುವುದು. ಎಚ್.ಎನ್.ವ್ಯಾಲಿಯ ಜತೆಗೆ ಎತ್ತಿನಹೊಳೆ, ಕೃಷ್ಣ ಮೇಲ್ದಂಡೆ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ: ನಗರದ ಮರಳು ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ನಾಡುಪ್ರಭು ಕೆಂಪೇಗೌಡ ಪ್ರತಿಮೆ ಮತ್ತು ಭಾವಚಿತ್ರ ಸಹಿತ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಗೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ ನೀಡಿದರು. ಸೋಮನ ಕುಣಿತ, ಡೊಳ್ಳು ಕುಣಿತ, ತಮಟೆ ವಾದನ ಸೇರಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯು ಒಕ್ಕಲಿಗರ ಕಲ್ಯಾಣ ಮಂಟಪದವರೆಗೂ ನಡೆಯಿತು.
ಸಮುದಾಯ ಹೋರಾಡುತ್ತಿಲ್ಲ: ಇತರ ಉನ್ನತ ಸಮುದಾಯಗಳು ಒಬಿಸಿ ಮೀಸಲಾತಿಗೆ ಒತ್ತಡ ಹೇರುತ್ತಿವೆ. ಆದರೆ, ಒಕ್ಕಲಿಗರು ಸ್ವಾಭಿಮಾನದಿಂದ ಕೇಳುತ್ತಿಲ್ಲ. ಹಾಗೆಯೇ ಹೋರಾಟ ಮಾಡುತ್ತಿಲ್ಲ. ಕೇಳದೆ ಸರ್ಕಾರ ಏನನ್ನಾದರೂ ಕೊಡಲು ಹೇಗೆ ಸಾಧ್ಯ. ಇದಕ್ಕೆ ಸಮುದಾಯ ಎಚ್ಚೆತ್ತುಕೊಂಡು ಸವಲತ್ತಿಗೆ ಹೋರಾಡಬೇಕು. ಯಾರೊಂದಿಗೂ ಜಗಳವಾಡದೆ ಹೃದಯ ವೈಶಾಲ್ಯ ಮನೋಭಾವನೆಯೊಂದಿಗೆ ಕೊಡುಗೈ ದಾನಿಗಳಾಗಬೇಕು. ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.