ಜಿಲ್ಲೆ

ಕೆಂಪೇಗೌಡರ ಕೊಡುಗೆ ಅಪಾರ: 513ನೇ ಜಯಂತಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಬಣ್ಣನೆ

ತುಮಕೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕೊಡುಗೆಯಿಂದಾಗಿ ಕರುನಾಡು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಸಾಂಕೇತಿಕ ಆಚರಣೆ ಸಂದರ್ಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರಿನ ಶಿಲ್ಪಿ ಕೆಂಪೇಗೌಡರು ಅದ್ಭುತ ನಗರವನ್ನಾಗಿ ರೂಪಿಸುವ ದೂರದೃಷ್ಟಿಯ ಕನಸನ್ನಿಟ್ಟುಕೊಂಡು ನಿರ್ಮಿಸಿದ್ದರು ಎಂದು ಬಣ್ಣಿಸಿದರು.

ಕೆಲವು ದೊಡ್ಡ ದೊಡ್ಡ ನಗರಗಳು ಸಮುದ್ರದ ತಟದಲ್ಲಿ ಅಪಾಯದಲ್ಲಿವೆ. ಆದರೆ, ಬೆಂಗಳೂರು ನಗರ ನಿರ್ಮಾಣ ಮಾಡಿರುವುದು ಸಮುದ್ರ ಮಟ್ಟಕ್ಕಿಂತ 3000 ಅಡಿಗಳಷ್ಟು ಮೇಲ್ಭಾಗದಲ್ಲಿದೆ. ಭೂಕಂಪ ಆದರೂ ಅಷ್ಟು ಪ್ರಭಾವ ಬೀರುವುದಿಲ್ಲ, ಇಂತಹ ಪರಿಕಲ್ಪನೆಯನ್ನು ಹೊಂದಿ ಬೆಂಗಳೂರನ್ನು ನಿರ್ಮಾಣ ಮಾಡಿದಂತಹ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅಕ್ಕಿಪೇಟೆ, ಮಾಮೂಲಪೇಟೆ, ಬಳೇಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಸುಲ್ತಾನ್​ಪೇಟೆ, ಕಬ್ಬನ್​ಪೇಟೆ, ಉದ್ಯಾನಗಳು, ಕೆರೆಗಳು, ಹೀಗೆ ನಗರದ ಯೋಜನೆಗಳಿಗೆ ಹೊಸ ಪರಿಕಲ್ಪನೆಯನ್ನು ಕೊಟ್ಟಂತಹವರು ಕೆಂಪೇಗೌಡರು ಎಂದರು.

ಬೆಂಗಳೂರು ಸೇರಿ ಕೆಂಪೇಗೌಡರು ಆಳ್ವಿಕೆ ಮಾಡಿದ ಜಿಲ್ಲೆಗಳಲ್ಲಿ ತುಮಕೂರು ಕೂಡ ನೇರವಾದ ಆಡಳಿತದಲ್ಲಿ ಒಳಪಟ್ಟಂತಹ ಜಿಲ್ಲೆಯಾಗಿದೆ. ಎಲ್ಲರಿಗೂ ಅನ್ನ ನೀಡುವ ರೈತರು, ಆ ಅನ್ನದಾತನಿಗೆ ಕೆರೆಕಟ್ಟೆಗಳನ್ನು ಕಟ್ಟಿ ನೀರಾವರಿ ಯೋಜನೆ ಕಲ್ಪಿಸಿದ ಶ್ರೇಷ್ಠ ಆಡಳಿತಗಾರ ಕೆಂಪೇಗೌಡರು ಎಂದು ಸ್ಮರಿಸಿದರು.

ಸರ್ಕಾರಿ ನೌಕರರ ಸಂದ ಅಧ್ಯಕ್ಷ ನರಸಿಂಹರಾಜು, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ಸಮಾಜದ ಮುಖಂಡರಾದ ದೊಡ್ಡಲಿಂಗಪ್ಪ, ವೀರಯ್ಯ, ಸುಜಾತಾ ನಂಜೇಗೌಡ, ನರಸೇಗೌಡ, ವೇಣುಗೋಪಾಲ್​, ಭೈರವ ಗಿರೀಶ್​, ಲಕ್ಕೇಗೌಡ, ಜಯರಾಮೇಗೌಡ, ಗೋವಿಂದೇಗೌಡ, ಮಂಜುನಾಥ್​ ಇದ್ದರು.

ಸದಾನಂದಗೌಡರ ಮಾತು ಸತ್ಯ: ಸ್ಮಾರ್ಟ್​ಸಿಟಿ ನಾವು ನೀವು ಹುಟ್ಟು ಹಾಕಿದ್ದು ಅಂದುಕೊಳ್ಳಬೇಡಿ. ನಾಡಪ್ರಭು ಕೆಂಪೇಗೌಡರು ಅಂದೇ ಸ್ಮಾರ್ಟ್​ಸಿಟಿ ಪರಿಕಲ್ಪನೆಯನ್ನು ಕೊಟ್ಟಿದ್ದರೆಂಬ ಮಾಜಿ ಸಿಎಂ ಸದಾನಂದಗೌಡರ ಮಾತು ನಿಜಕ್ಕೂ ನೂರಕ್ಕೆ ನೂರು ಸತ್ಯ. ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಂತಹ ಸ್ಮಾರ್ಟ್​ಸಿಟಿ ಪರಿಕಲ್ಪನೆಗೆ ಕೆಂಪೇಗೌಡರ ಪ್ರೇರಣೆ ಎಂದರೆ ತಪ್ಪಾಗಲಾರದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ತಿಳಿಸಿದರು.

ವಾಸ್ತುಶಿಲ್ಪಿ, ಸಿವಿಲ್​ ಇಂಜಿನಿಯರ್​, ಉತ್ತಮ ತಂತ್ರ, ಹಣಕಾಸು, ಶಿಕ್ಷಣ, ವಹಿವಾಟು, ರಫ್ತು ಹಾಗೂ ಆಮದುಗಳ ಬಗ್ಗೆ ದೂರದೃಷ್ಠಿಯ ಪರಿಕಲ್ಪನೆಯನ್ನು ಹೊಂದಿದ್ದಂತಹ ಅತ್ಯುತ್ತಮ ಆಡಳಿತ ಹಿನ್ನೆಲೆಯುಳ್ಳ ಕೆಂಪೇಗೌಡರ ಜಯಂತಿಯನ್ನು ನಾಡಬಹಬ್ಬವೆಂದು ಸರ್ಕಾರ ೂಷಣೆ ಮಾಡಬೇಕು. > ಮುರಳೀಧರ ಹಾಲಪ್ಪ ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ