ಜಿಲ್ಲೆ

ಕೆಂಪೇಗೌಡ ಜಯಂತಿ ಪ್ರಚಾರ ರಥಕ್ಕೆ ಚಾಲನೆ

ಮೈಸೂರು: ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಪ್ರಚಾರರಥಕ್ಕೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ವಾಹನದಲ್ಲಿದ್ದ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ನಾಡಿಗೆ ಕೆಂಪೇಗೌಡರು ನೀಡಿದ ಕೊಡುಗೆ ಅಪಾರ. ಜೂ.27ರಂದು ಆಚರಿಸುವ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಆಹ್ವಾನಿಸುವ ನಿಟ್ಟಿನಲ್ಲಿ ಇದನ್ನು ಕೈಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಯಾತ್ರೆ ಸಂಚರಿಸಿ, ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ನಾಡು ಕಟ್ಟುವಲ್ಲಿ ಕೆಂಪೇಗೌಡರ ಪಾತ್ರ ಅನನ್ಯ. ರಾಜ್ಯ ರಾಜಧಾನಿ ಬೆಂಗಳೂರು ನಿರ್ಮಾತೃ ಆಗಿರುವ ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ಸರ್ವ ಜನಾಂಗದ ಹಿತ ಕಾಯುವ ಕೆಲಸ ಮಾಡಿದ್ದಾರೆ. ಸುಸಜ್ಜಿತ ನಗರ ನಿರ್ಮಾಣ ಮಾಡಿ, ಕೃಷಿಗೂ ಹೆಚ್ಚಿನ ಒತ್ತು ನೀಡಿದ್ದಾರೆ. ನೂರಾರು ಕೆರೆ ನಿರ್ಮಿಸಿ ಜನ-ಜಾನುವಾರುಗಳಿಗೂ ನೆರವಾಗಿದ್ದಾರೆ. ಇಂತಹ ನಾಯಕರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಜೂ.27ರಂದು ನಡೆಯುವ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಬೇಕು ಎಂದು ಕೋರಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ಮಾಜಿ ಮೇಯರ್‌ಗಳಾದ ಬಿ.ಕೆ.ಪ್ರಕಾಶ್, ಮೋದಾಮಣಿ, ಕವೀಶ್‌ಗೌಡ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ವಿಕ್ರಾಂತ್ ಪಿ.ದೇವೇಗೌಡ , ಮುಖಂಡರಾದ ಎಂ.ಮೋಹನ್‌ಕುಮಾರ್ ಗೌಡ, ಬೋರೇಗೌಡ, ಭಾಸ್ಕರ್ ಇನ್ನಿತರರಿದ್ದರು.

ರಥ ಸಂಚಾರ: ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಹೊರಟ ಪ್ರಚಾರ ರಥ ಮೈಸೂರಿನ ಹಿನಕಲ್, ಹೂಟಗಳ್ಳಿ, ಕೂರ್ಗಳ್ಳಿ, ಬೆಳವಾಡಿ, ಸಾಹುಕಾರ್ ಹುಂಡಿ, ಮರಟಿಕ್ಯಾತನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾಗಿ ಕೆಂಪೇಗೌಡರ ದಿನಾಚರಣೆಯ ಸಂದೇಶ ಸಾರಿತು.