ಜಿಲ್ಲೆ

ಕೆಂಪುಕೋಟೆ ನೋಡಲು ಶಿರಸಿಗೆ ಬನ್ನಿ

ಶಿರಸಿ: ಎರಡು ವರ್ಷಗಳಿಂದ ಸಂಭ್ರಮ ಕಳೆದುಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆ, ಈ ಬಾರಿ ಸಡಗರ ಸಂಭ್ರಮದಿಂದ ನಡೆಯುತ್ತಿದ್ದು, ಇದಕ್ಕಾಗಿ ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಆಯೋಜಕರು ನಿರ್ವಿುಸಿದ ವಿವಿಧ ರೀತಿಯ ಮಂಟಪಗಳು ಗಮನ ಸೆಳೆಯುತ್ತಿವೆ.

ಇಲ್ಲಿನ ಜೂ ಸರ್ಕಲ್ ಬಳಿ ಮಾಡಲಾದ ಕೆಂಪು ಕೋಟೆಯ ಮಂಟಪ ನೋಡುಗರನ್ನು ಆಕರ್ಷಿಸುತ್ತಿದೆ. ಈ ಬಾರಿ ಶಿರಸಿಯ 48 ಕಡೆಗಳಲ್ಲಿ ದೊಡ್ಡ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಜೂ ಸರ್ಕಲ್​ನಲ್ಲಿ ಕೆಂಪುಕೋಟೆ ಮಾದರಿ ನಿರ್ವಿುಸಲು ಒಂದು ತಿಂಗಳಿನಿಂದ ತಯಾರಿ ನಡೆಸಲಾಗಿತ್ತು. ಇದಕ್ಕಾಗಿ 10ಕ್ಕೂ ಹೆಚ್ಚು ಜನರು ಹಗಲಿರುಳು ಶ್ರಮಿಸಿದ್ದು, ಅಂದಾಜು 5 ಲಕ್ಷ ರೂ.ಗಳಿಗೂ ಹೆಚ್ಚು ವ್ಯಯಿಸಿ ಕೆಂಪುಕೋಟೆ ಮಾದರಿ ನಿರ್ಮಾಣ ಮಾಡಲಾಗಿದೆ.

ಜೂ ಸರ್ಕಲ್ ಗಣೇಶೋತ್ಸವ ಸಮಿತಿಗೆ 41ನೇ ವರ್ಷದ ಸಂಭ್ರಮ. ಈ ಸಲ ಸ್ವಾತಂತ್ರ್ಯ ಅಮೃತ ಮಹೋತ್ಸವ ನೆನಪಿಗಾಗಿ ಕೆಂಪುಕೋಟೆ ಮಾದರಿ ನಿರ್ವಿುಸಿದ್ದಾರೆ. ಕೆಂಪುಕೋಟೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದಂತೆ ಕಾಣುತ್ತಿದೆ. ಈ ಮಂಟಪ ಕಲಾಕೃತಿ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಜೂ ಸರ್ಕಲ್​ನಲ್ಲಿ ಮಾಡುವ ವಿಭಿನ್ನ ಕಲಾಕೃತಿಯ ಮಂಟಪಕ್ಕೆ ಕಳೆದ 5 ವರ್ಷದಿಂದ ಮೊದಲ ಬಹುಮಾನ ಬರುತ್ತಿದೆ. ಅದರಂತೆ ಈ ಬಾರಿಯೂ ಬರುವ ನಿರೀಕ್ಷೆ ಇದೆ. ಇಲ್ಲಿಗೆ ಭೇಟಿ ನೀಡಿದ ಜನರು ಕೆಂಪು ಕೋಟೆ ನೋಡಲು ದೆಹಲಿಗೆ ತೆರಳುವುದು ಬೇಡ ಇಲ್ಲಿಯೇ ಕೆಂಪು ಕೋಟೆ ನೋಡಲು ಸಿಕ್ಕಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. | ಪ್ರಕಾಶ ಭಂಡಾರಿ ಗಣೇಶೋತ್ಸವ ಸಮಿತಿ ಆಯೋಜಕ