ಕಡೂರು: ಅಮೃತ್ ಮಹಲ್ ಹೋರಿಕರುಗಳ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಯಿತು.
ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಸಮೀಪದ ಜಾನುವಾರು ತಳಿಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಅಮೃತ್ ಮಹಲ್ ಗಂಡುಕರುಗಳ ಬಹಿರಂಗ ಹರಾಜಿನಲ್ಲಿ ಕಳೆದ ಬಾರಿಗಿಂತಲೂ ತುಸು ಹೆಚ್ಚಾಗಿರುವ ರಾಸುಗಳಲ್ಲಿ ಪಾತ್ರೆ, ನಾರಾಯಣಿ, ಕಾವೇರಿ, ಕರಿಯಕ್ಕ, ಮದಕರಿ, ಸಣ್ಣಿ, ಗಂಗೆ, ಕೆಂಪಲಕ್ಕಿ, ಮಾರಿ, ಕಡೇಗಣ್ಣಿ ಮೆಣಸಿ, ಭದ್ರಿ, ಚನ್ನಕ್ಕ, ಗಂಗೆ, ಕಾಳಿಂಗರಾಯ, ದೇವಗಿರಿ, ಮಲಾರ, ಚನ್ನಬಸವಿ, ರಾಯತದೇವಿ, ಮುತ್ತೈದೆ, ಬೆಳದಿಂಗಳು, ಗಾಳಿಕೆರೆ, ಸನ್ಯಾಸಿ, ಕೆಂದಾವರೆಯಂತಹ ನೂರಾರು ಹೆಸರುಗಳ ತಳಿಗಳಿಂದ ಗುರುತಿಸಲ್ಪಡುವ ಹೋರಿಕರುಗಳು ಒಂದೂವರೆ ವರ್ಷದಿಂದ ಎರಡು ವರ್ಷದ ಒಳಗಿನದಾಗಿದ್ದವು. ಅಮೃತ್ ಮಹಲ್ ಕ್ಷೇತ್ರದ 172 ಹೋರಿಕರುಗಳು, 7 ಬೀಜದ ಹೋರಿಗಳನ್ನು ಹರಾಜಿನಲ್ಲಿ ಇಡಲಾಗಿತ್ತು. ಅಜ್ಜಂಪುರದ ಕೆಂಪಾಲ್ಲಕ್ಕಿ-ಕಾಟಿ ತಳಿ 3.76 ಲಕ್ಷ ರೂ. ಮೊತ್ತದ ಗರಿಷ್ಠ ಬೆಲೆಗೆ ಸೊರಬದ ಶಿಢ್ಲಘಟ್ಟದ ಶಂಕರಪ್ಪ ಹರಾಜಿನಲ್ಲಿ ಕೂಗಿ ಪ್ರಥಮವಾಗಿ ತಮ್ಮದಾಗಿಸಿಕೊಂಡರು. ದ್ವಿತೀಯವಾಗಿ ಬಾಸೂರಿನ ಮಸಣಿ ಮತ್ತು ಗೌರಿ ಜೋಡಿಯನ್ನು ಶಿಕಾರಿಪುರದ ಕೊಟ್ರೇಶಪ್ಪ 3.16 ಲಕ್ಷ ರೂ.ಗೆ ಹಾಗೂ ಶಿಕಾರಿಪುರದ ಗೊಗ್ಗ ಗ್ರಾಮದ ವಿರೂಪಾಕ್ಷ ಕಾವೇರಿ ಮತ್ತು ಕಾಳಿಂಗರನ್ನು 3.12 ಲಕ್ಷ ರೂ.ಗೆ ಬಿಡ್ ಕೂಗುವ ಮೂಲಕ 3ನೇ ಸ್ಥಾನ ಪಡೆದುಕೊಂಡರು.
ಹರಾಜು ಪ್ರಕ್ರಿಯೆಯಲ್ಲಿ 291 ಬಿಡ್ಡುದಾರರು ಪಾಲ್ಗೊಂಡಿದ್ದು, ಹಾಸನ, ಮೈಸೂರು, ಅರಸೀಕೆರೆ, ರಾಣೆಬೆನ್ನೂರು, ಹಾವೇರಿ, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಳ್ಳಕೆರೆ ಸೇರಿದಂತೆ ರಾಜ್ಯದ ನಾನಾ ಭಾಗದ ರೈತರು, ಗೋಶಾಲೆ ಮತ್ತು ಮಠದಿಂದಲೂ ಸಾವಿರಾರು ಜನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಬೀರೂರು ಪೊಲೀಸ್ ಉಪನಿರೀಕ್ಷಕ ಸಜಿತ್‌ಕುಮಾರ್ ಭದ್ರತೆ ಕಲ್ಪಿಸಿದ್ದರು. ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ಶಿವಣ್ಣ, ಅಮೃತ್ ಮಹಲ್ ತಳಿಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ. ರಾಘವೇಂದ್ರ ಪಾಟೀಲ್, ಡಾ. ಉಮೇಶ್, ಡಾ, ಎ.ಬಿ.ಪ್ರಭಾಕರ್, ಡಾ. ಭಾನುಪ್ರಕಾಶ್, ಡಾ. ನವೀನ್ ಇತರರಿದ್ದರು.