ಮೈಸೂರು: ನಾಲ್ವಡಿ ಅವರು ದೂರದೃಷ್ಟಿತ್ವ ಹೊಂದುವಂತೆ ರೂಪಿಸಿದ ತಾಯಿ ಕೆಂಪನಂಜಮ್ಮಣ್ಣಿ ಅವರ ಕುರಿತು, ಹೆಚ್ಚಿನ ಸಂಶೋಧನೆ ದಾಖಲಿಸುವ ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಭಿಪ್ರಾಯಪಟ್ಟರು.
ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜರ ಆಳ್ವಿಕೆಯಿಂದಾಗಿ ಮೈಸೂರು, ರಾಜ್ಯಕ್ಕೆ ಕಿರೀಟವಿಟ್ಟಂತಿದೆ. ರಾಜಮನೆತನವನ್ನು ಸ್ಮರಿಸುವಾಗ ಕೆಲವೊಂದು ರಾಜರ ಹೆಸರು ಮಾತ್ರ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡು ಬಿಡುತ್ತವೆ. ಅವುಗಳಲ್ಲಿ ರಾಣಿ ಕೆಂಪನಂಜಮ್ಮಣಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಪ್ರಮುಖವಾದವು ಎಂದರು.
ರಾಣಿ ಆಗಿದ್ದರೂ ಕೆಂಪನಂಜಮ್ಮಣಿ ಅವರು ವೈಯಕ್ತಿಕ ಜೀವನ, ಹಿತಾಸಕ್ತಿ ಮರೆತು ಪ್ರಜೆಗಳಿಗಾಗಿ ಚಿಂತಿಸಿದವರು. ತಮ್ಮ ಆಭರಣವನ್ನು ಮಾರಲು ಕೊಟ್ಟು ಅಣೆಕಟ್ಟೆ ಕಟ್ಟಲು ಉದಾರ ಮನಸ್ಸು ಮಾಡಿದರು. ಅಂದಿನ ಕಾಲದಲ್ಲಿಯೇ ದೂರದೃಷ್ಟಿ ಹೊಂದಿದ್ದ ನಾಲ್ವಡಿಯವರು ಹಿಂದಿನ ಅನುಭವಗಳನ್ನು ಆಧರಿಸಿ ಮುಂದಾಲೋಚಿಸಿ ಭವಿಷ್ಯಕ್ಕೆ ಸಿದ್ಧತೆ ನಡೆಸಿದ್ದರು ಎಂದು ಹೇಳಿದರು.
ಮೈಸೂರು ವ್ಯವಸ್ಥಿತವಾಗಿ ಬೆಳೆಯಲು ಅಂದೇ ನಗರಾಭಿವೃದ್ಧಿ ಮಂಡಳಿಯನ್ನು ರಚಿಸಿದ್ದರು. ಅಗಲವಾದ ರಸ್ತೆ, ಮುಚ್ಚಿದ ಒಳಚರಂಡಿ, ಶಿಕ್ಷಣಕ್ಕೆ ಒತ್ತು, ಅಣೆಕಟ್ಟುಗಳ ನಿರ್ಮಾಣ, ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಕಾಯ್ದೆಗಳನ್ನು ಅನುಷ್ಠಾನ ಮಾಡಿದರು. ಹೀಗಾಗಿ ಅವರು ಒಬ್ಬ ರಾಜರೂ ಹೌದು, ಒಬ್ಬ ಋಷಿಯೂ ಆಗಿದ್ದರಿಂದ ರಾಜರ್ಷಿ ಆದರು ಎಂದು ಹೇಳಿದರು.
ಇಂತಹ ರಾಜಶ್ರೇಷ್ಠರ ಕೊಡುಗೆಗಳು ಮುಂದಿನ ಪೀಳಿಗೆಗೂ ತಲುಪಬೇಕು. ಇಂದಿನ ಯುವ ಜನತೆಗೆ ಅವರ ಸಾಧನೆಗಳನ್ನು ತಿಳಿಸುವ ಕೆಲಸಗಳು ಆಗಬೇಕು. ನಾಲ್ವಡಿ ಅವರೊಂದಿಗೆ ಕೆಂಪನಂಜಮಣ್ಣಿ ಅವರ ಸಾಧನೆಯನ್ನು ಪರಿಗಣಿಸಬೇಕು ಎಂದರು.