ಶ್ರೀರಂಗಪಟ್ಟಣ: ತಾಲೂಕಿನ ಕರಿಘಟ್ಟ ಬೆಟ್ಟಕ್ಕೆ ಹೊಂದಿಕೊಂಡ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು, ಸುಮಾರು 150 ಎಕರೆಯಷ್ಟು ಪ್ರದೇಶ ಹಾಗೂ ಬೆಲೆಬಾಳುವ ಗಿಡ-ಮರಗಳು ಬೆಂಕಿಗೆ ಆಹುತಿಯಾಗಿವೆ.
ತಾಲೂಕಿನ ಅಲ್ಲಾಪಟ್ಟಣ ಹಾಗೂ ನೀಲನಕೊಪ್ಪಲು ಗ್ರಾಮಗಳ ಹೊರ ವಲಯದಿಂದ ಮಧ್ಯಾಹ್ನ 12.30ರಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಮಧ್ಯಾಹ್ನ 2ರ ವೇಳೆಗೆ ಕರಿಘಟ್ಟ ಬೆಟ್ಟದದ ಸಾಲಿನ ಕುದುರೆ ಕಲ್ಲು ಬೆಟ್ಟ, ದೊಡ್ಡಬೆಟ್ಟ, ಚಿನ್ನನಾಯಕನಹಳ್ಳಿ ಗ್ರಾಮ ಸಮೀಪದ ಅರಣ್ಯ ಪ್ರದೇಶವನ್ನು ವೇಗವಾಗಿ ಆವರಿಸಿ ಅಮೂಲ್ಯ ಗಿಡ-ಮರಗಳೊಂದಿಗೆ ಸಣ್ಣ-ಪುಟ್ಟ ಜೀವಿಗಳನ್ನು ಸಹ ಸಂಪೂರ್ಣ ಸುಟ್ಟು ಭಸ್ಮ ಮಾಡಿದೆ.
ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿ- ಸಿಬ್ಬಂದಿ ದೌಡಾಯಿಸಿ ಕೈಗಳಲ್ಲಿ ಸೊಪ್ಪುಗಳಿಂದ ಬಡಿದು ಬೆಂಕಿ ನಂದಿಸುವ ಜತೆಗೆ ಕಾಡ್ಗಿಚ್ಚಿಗೆ ವಿರುದ್ಧ ದಿಕ್ಕಲ್ಲಿ ಬೆಂಕಿ ಹಚ್ಚಿ(ಕೌಂಟರ್ ಫೈಯರ್) ಬೆಂಕಿಯ ಜ್ವಾಲೆ ನಿಯಂತ್ರಿಸಲು ಕಾರ್ಯನಿರ್ವಹಿಸಿದರು. ಬೆಟ್ಟದಲ್ಲಿ ಅಪೂರ್ವ ಹಾಗೂ ಬೆಲೆ ಬಾಳುವ ಔಷಧ ಗುಣಗಳ ಗಿಡಗಳಿರುವ ಟ್ರೀ ಪಾರ್ಕ್ ಹಾಗೂ ಅಪ್ಪು ವನಕ್ಕೂ ಬೆಂಕಿ ತಗುಲಿದ್ದು, ಪರಿಸರ ಪ್ರೇಮಿ ರಮೇಶ್ ನೇತೃತ್ವದ ಹಸಿರು ಸೇನೆಯ ಹತ್ತಾರು ಮಕ್ಕಳ ತಂಡವೂ ನೀರಿನ ಟ್ಯಾಂಕರ್ ಕೊಂಡೊಯ್ದು ಕೈಯಲ್ಲಿ ಕ್ಯಾನುಗಳ ಮೂಲಕ ನೀರು ಹಾಕಿ ಬೆಂಕಿ ನಂದಿಸುವಲ್ಲಿ ಶತ ಪ್ರಯತ್ನ ಮಾಡಿ ಅರಣ್ಯದ ಜತೆಗೆ ತಾವು ನೆಟ್ಟು ಬೆಳೆಸಿದ್ದ ಸಸ್ಯ ಸಂಪತ್ತನ್ನು ಬೆಂಕಿಯಿಂದ ರಕ್ಷಿಸಿಕೊಂಡಿದ್ದಾರೆ.
ಬೇಸಿಗೆ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಬೆಳೆದಿದ್ದ ನಾಲೆ ಹುಲ್ಲು ಹಾಗೂ ಮರಗಳಿಂದ ಬಿದ್ದ ಎಲೆಗಳು ಒಣಗಿದ್ದು, ಬೀಸುತ್ತಿದ್ದ ಗಾಳಿಗೆ ಬೆಂಕಿ ವೇಗವಾಗಿ ವ್ಯಾಪಿಸಿ, ಎಲ್ಲೆಡೆಯೂ ಹೊತ್ತಿ ಧಗಧಗನೆ ಉರಿದು ಬೆಲೆ ಬಾಳುವ ಮರಗಳು,ಗಿಡಗಂಟಿ ಬಳ್ಳಿಗಳ ಸಹಿತ ಭೂಮಿಯೊಳಗೆ ಅವಿತುಕೊಳ್ಳಲು ಯತ್ನಿಸುತ್ತಿದ್ದ ಹಾವು, ಚೇಳು, ಪುಟ್ಟ ಪಕ್ಷಿಗಳು ಸೇರಿದಂತೆ ಸಣ್ಣ-ಪುಟ್ಟ ಜೀವಿಗಳು ಸಹ ಜ್ವಾಲೆಯಲ್ಲಿ ಸಿಲುಕಿ ಸುಟ್ಟು ಕರಕಲಾಗಿವೆ.
ಸ್ಥಳದಲ್ಲಿ ಆರ್‌ಎಫ್‌ಒ ವಿನೋದ್‌ಗೌಡ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಂಜೆವರೆಗೂ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.