ಚಾಮರಾಜನಗರ: ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಂ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಮೂಲಕ ಸಮಾಜಸೇವೆ ಮಾಡಲಾಗುವುದು ಎಂದು ಅಭಿಮಾನಿ ಹೊನ್ನೂರು ವೆಂಕಟೇಶ್ ಹೇಳಿದರು.
ಕನ್ನಡದಲ್ಲಿ ಐಎಎಸ್ ಪರೀಕ್ಷೆ ಪಾಸುಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೆ.ಶಿವರಾಂ ಪಾತ್ರರಾಗಿದ್ದಾರೆ. ಅವರ ಸೇವಾವಧಿಯಲ್ಲಿ ಅನೇಕರು ತಳಸಮುದಾಯಗಳ ಯುವತಿಯರು ನರ್ಸಿಂಗ್, ಗಗನಸಖಿ ಹುದ್ದೆ ಸೇರಲು ಅವಕಾಶ ಕಲ್ಪಿಸಿಕೊಟ್ಟರು. ರಾಜ್ಯದಲ್ಲಿ ಛಲವಾದಿ ಮಹಾಸಭಾ ಸಂಘಟನೆ ಸ್ಥಾಪಿಸಿ ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಜಿಲ್ಲೆಯ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿ ವಹಿಸಿದ್ದರು. ಆದರೆ ಪ್ರಸ್ತುತ ಅವರಿಂದ ಸಹಾಯ ಪಡೆದವರು ಅವರನ್ನು ಸ್ಮರಣೆ ಮಾಡುತ್ತಿಲ್ಲ. ಆಗಾಗಿ ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಕೆ.ಶಿವರಾಂ ಟ್ರಸ್ಟ್ ಸ್ಥಾಪಿಸಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅವರ ಸಾಧನೆ, ಸೇವಾ ಕಾರ್ಯವನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಲಾಗುವುದು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕೆ.ಶಿವರಾಂ ಅಭಿಮಾನಿಗಳಾದ ಸುನೀಲ್ ಕೆಸ್ತೂರು, ಹನುಮಂತರಾಜು, ಕುಮಾರ್, ಮಹೇಶ್ ಹಾಜರಿದ್ದರು.